ಬೆಂಗಳೂರು: ದುಬೈನಿಂದ ಬೆಂಗಳೂರಿಗೆ ಬರೋಬ್ಬರಿ 14 ಕೆಜಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಸ್ಯಾಂಡಲ್ವುಡ್ ನಟಿ ರನ್ಯಾ ರಾವ್ ಬಂಧನಕ್ಕೊಳಗಾಗಿದ್ದು, ಜಾಮೀನು ಸಿಗದ ಟೆನ್ಷನ್ ಮಧ್ಯೆ ರನ್ಯಾ ರಾವ್ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಪತಿ ಜತಿನ್ ಹುಕ್ಕೇರಿ ರನ್ಯಾಳಿಂದ ವಿಚ್ಛೇದನ ಪಡೆಯಲು ಕೋರ್ಟ್ಗೆ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಮದುವೆ ಬಳಿಕ ನಿರಂತರ ಸಮಸ್ಯೆಗಳನ್ನು ಎದುರಿಸುತ್ತಿರುವ ಜತಿನ್, ರನ್ಯಾಳಿಂದ ಅಂತರ ಕಾಯ್ದುಕೊಂಡಿದ್ದಾರೆ.
2024 ಅಕ್ಟೋಬರ್ 6 ರಂದು ಬೆಂಗಳೂರಿನ ಬಾಸ್ಟಿನ್ ರೆಸ್ಟೋರೆಂಟ್ನಲ್ಲಿ ರನ್ಯಾ, ಜತಿನ್ ಇಬ್ಬರೂ ಮದುವೆ ಬ್ರೋಕರ್ ಮೂಲಕ ಭೇಟಿಯಾಗಿದ್ದರು. 2024 ಅಕ್ಟೋಬರ್ 23ರಂದು ರನ್ಯಾ, ಜತಿನ್ ಎಂಗೇಜ್ ಮೆಂಟ್ ಆಗಿತ್ತು. 2024 ನವೆಂಬರ್ 27 ರಂದು ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ಮದುವೆ ಕೂಡ ಆಗಿತ್ತು. ಬಳಿಕ ಲ್ಯಾವೆಲ್ಲೆ ರಸ್ತೆಯ ಅಪಾರ್ಟ್ ಮೆಂಟ್ನಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು.
ಮದುವೆಯಾದ ಒಂದೇ ತಿಂಗಳಿಗೆ ರನ್ಯಾ, ಜತಿನ್ ನಡುವೆ ಮನಸ್ತಾಪ ಶುರುವಾಗಿದ್ದು, ಸಂಬಂಧದಲ್ಲಿ ಪಾರದರ್ಶಕತೆ ಇಲ್ಲ, ಮಾತುಕತೆಯೂ ಇರಲಿಲ್ಲವೆಂದು ಪತಿ ಜತಿನ್ ಹುಕ್ಕೇರಿ ಹೈಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಸಂಬಂಧಿಕರು ಸಂಧಾನಕ್ಕೆ ಪದೇ ಪದೇ ಯತ್ನಿಸಿದರೂ ಸಂಬಂಧ ಸರಿಹೋಗಿರಲಿಲ್ಲ.