ಫರಿದಾಬಾದ್:- ಫರಿದಾಬಾದ್ ಜಿಲ್ಲೆಯ ರೋಶನ್ ನಗರದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಸೊಸೆಯನ್ನು ಮಾವನೇ ಜೀವ ತೆಗೆದು, ಮನೆ ಮುಂದೆ 10 ಅಡಿ ಅಳದ ಗುಂಡಿ ತೋಡಿ ಹೂತು ಹಾಕಿರುವ ಘಟನೆ ಜರುಗಿದೆ. 24 ವರ್ಷದ ತನು ಸಿಂಗ್ ಜೀವ ಕಳೆದುಕೊಂಡ ಮಹಿಳೆ.
ಮಾವನೇ ಏಪ್ರಿಲ್ ತಿಂಗಳಲ್ಲಿ ತನು ಸಿಂಗ್ಳ ಪ್ರಾಣ ತೆಗೆದಿದ್ದನು. ಬಳಿಕ ಮನೆಯ ಮುಂದೆ ಚರಂಡಿಗಾಗಿ ಎಂದು 10 ಅಡಿ ಅಳದ ಗುಂಡಿ ತೆಗೆದು ಅದರೊಳಗೆ ಸೊಸೆಯ ದೇಹ ಹಾಕಿ ರಾತ್ರೋರಾತ್ರಿ ಮುಚ್ಚಿ ಹಾಕಿದ್ದ. 2 ತಿಂಗಳ ಬಳಿಕ ಫರಿದಾಬಾದ್ ಪೊಲೀಸರು ಈ ನಿಗೂಢ ಕೊಲೆ ಕೇಸ್ ಅನ್ನು ಭೇದಿಸಿದ್ದಾರೆ.
2 ವರ್ಷದ ಹಿಂದೆ ತನುಸಿಂಗ್ ಎಂಬ ಯುವತಿಯನ್ನು ರೋಶನ್ ನಗರದ ಅರುಣ್ ಸಿಂಗ್ಗೆ ನೀಡಿ ಮದುವೆ ಮಾಡಲಾಗಿತ್ತು. ಆದರೇ, ತನು ಸಿಂಗ್ಗೆ ಅರುಣ್ ಸಿಂಗ್, ತಂದೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು. ವರದಕ್ಷಿಣೆ ತರಲಾಗದೇ, ತನುಸಿಂಗ್ ತವರು ಮನೆ ಸೇರಿದ್ದಳು. ಬಳಿಕ ಮತ್ತೆ ಗಂಡನ ಮನೆಗೆ ಬಂದಿದ್ದಳು. ಈ ವೇಳೆ ನಿರಂತರವಾಗಿ ವರದಕ್ಷಿಣೆ ಕಿರುಕುಳ ನೀಡಿದ್ದ ಪತಿ ಅರುಣ್ ಸಿಂಗ್ ಕುಟುಂಬ, ಸೊಸೆಯ ಉಸಿರು ನಿಲ್ಲಿಸಿತ್ತು ಎಂದು ಹೇಳಲಾಗಿದೆ.
ಏಪ್ರಿಲ್ 23 ರಂದು ಮನೆ ಮುಂದೆ ತನು ಸಿಂಗ್ ಮಾವ ಭೂಪಸಿಂಗ್ 10 ಅಡಿ ಅಳದ ಗುಂಡಿ ತೆಗೆದಿದ್ದ. ಒಳಚರಂಡಿ ಕೆಲಸಕ್ಕಾಗಿ ಗುಂಡಿ ತೆಗೆದಿರುವುದಾಗಿ ಅಕ್ಕಪಕ್ಕದವರಿಗೆ ಹೇಳಿದ್ದ. ಆದರೇ, ಅದರಲ್ಲೇ ತನ್ನ ಮನೆಯ ಸೊಸೆ ತನು ಸಿಂಗ್ ಶವವನ್ನು ಹಾಕಿ ರಾತ್ರೋರಾತ್ರಿ ಮುಚ್ಚಿ ಹಾಕಿದ್ದ. ದೃಶ್ಯ ಸಿನಿಮಾದ ಮಾದರಿಯಲ್ಲೇ ಶವವನ್ನು ಮನೆ ಮುಂದಿನ ಗುಂಡಿಯಲ್ಲಿ ಹಾಕಿ ಮುಚ್ಚಿದ್ದ. ಏಪ್ರಿಲ್ 25 ರಂದು ತನ್ನ ಮನೆಯ ಸೊಸೆ ತನು ಸಿಂಗ್ ನಾಪತ್ತೆಯಾಗಿದ್ದಾಳೆ ಎಂದು ಪೊಲೀಸ್ ಠಾಣೆಗೆ ಭೂಪಸಿಂಗ್ ದೂರು ನೀಡಿದ್ದ.
ಆದರೇ, ಪೊಲೀಸರಿಗೆ ಭೂಪಸಿಂಗ್ ಹಾಗೂ ಮಗ ಅರುಣ್ ಸಿಂಗ್ ಮೇಲೆಯೇ ಅನುಮಾನ ಇತ್ತು. ಹೀಗಾಗಿ ತನು ಸಿಂಗ್ ಪತಿ ಅರುಣ್ ಸಿಂಗ್, ಮಾವ ಭೂಪಸಿಂಗ್ರನ್ನೇ ತೀವ್ರ ವಿಚಾರಣೆ ನಡೆಸಿದ್ದರು. ಈ ವೇಳೆ ಒಂದೊಂದು ರೀತಿಯ ವಿಭಿನ್ನ ಹೇಳಿಕೆ ನೀಡಿದ್ದರು. ಕೊನೆಗೆ ಏಪ್ರಿಲ್ 21ರ ರಾತ್ರಿಯೇ ತನ್ನ ಸೊಸೆಯನ್ನು ತಾನೇ ಹತ್ಯೆ ಮಾಡಿದ್ದಾಗಿ ಭೂಪಸಿಂಗ್ ಪೊಲೀಸರ ಮುಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ