ರಾಮನಗರ : ರಿಕಿ ರೈ ಮೇಲೆ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಡಾನ್ ಮುತ್ತಪ್ಪ ರೈ ಎರಡನೇ ಪತ್ನಿ ಅನುರಾಧ ಬಿಡದಿ ಪೊಲೀಸರ ಎದುರು ವಿಚಾರಣೆಗೆ ಹಾಜರಾಗಿದ್ದಾರೆ.
ಬಿಡದಿ ಪೊಲೀಸರು ದಾಖಲಿಸಿರುವ ಎಫ್‌ಐಆರ್ ನಲ್ಲಿ ಅನುರಾಧ ಕೂಡ ಆರೋಪಿಯಾಗಿದ್ದಾರೆ. ಹೀಗಾಗಿ ಪೊಲೀಸರು ಸತತ ಆರು ಗಂಟೆಗಳ ಕಾಲ ಮುತ್ತಪ್ಪ ರೈ ಎರಡನೇ ಪತ್ನಿ ಅನುರಾಧ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅನುರಾಧ, ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ, ಆದರೂ, ನನ್ನ ವಿರುದ್ಧ ಏಕೆ ದೂರು ದಾಖಲಿಸಲಾಗಿದೆ ಎಂದು ನನಗೆ ತಿಳಿದಿಲ್ಲ, ವಿಚಾರಣೆಯ ಸಮಯದಲ್ಲಿ ನಾನು ಪೊಲೀಸರಿಗೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಒದಗಿಸಿದ್ದೇನೆ. ನ್ಯಾಯಾಲಯದಲ್ಲಿ ಬಾಕಿ ಉಳಿದಿದ್ದ ರಿಕಿ ಮತ್ತು ತನ್ನ ನಡುವಿನ ಭೂ ವಿವಾದ ಪ್ರಕರಣವನ್ನು ಸೌಹಾರ್ದಯುತವಾಗಿ ಇತ್ಯರ್ಥಗೊಳಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಕಳೆದ ಅಕ್ಟೋಬರ್‌ನಲ್ಲಿ ಕೋರ್ಟ್ ಗೆ ಪತ್ರಗಳಿಗೆ ಸಹಿ ಹಾಕಲು ಬಂದಾಗ ನಾನು ರಿಕಿಯನ್ನು ನೋಡಿದೆ. ಅಂದಿನಿಂದ, ನಾನು ಅವನೊಂದಿಗೆ ಯಾವುದೇ ಸಂಪರ್ಕವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ.
ಸದ್ಯ, ಘಟನೆಗೆ ಸಂಬಂಧಿಸಿದಂತೆ ರಿಕಿ ಜೊತೆ ಕೆಲಸ ಮಾಡುತ್ತಿದ್ದ ವಿಟ್ಟಲ್ ಮೋನಪ್ಪನನ್ನು ಬಂಧಿಸಲಾಗಿದೆ. ವಿವಿಧ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ಏಪ್ರಿಲ್ 19 ರಂದು ಬೆಂಗಳೂರಿನ ಹೊರವಲಯದ ಬಿಡದಿಯಲ್ಲಿ ಕಾರಿನ ಮೇಲೆ ಗುಂಡು ಹಾರಿಸಿದ್ದು, 35 ವರ್ಷದ ರಿಕಿ ಅಪಾಯದಿಂದ ಪಾರಾಗಿದ್ದರು.