ಬೆಂಗಳೂರು: ಸಿದ್ದರಾಮಯ್ಯನವರೇ ಸಲಹೆ ನೀಡುವ ಯಾವುದೇ ಅರ್ಹತೆಯೂ ತಮಗಿಲ್ಲ ಎಂದು ಪ್ರತಿಪಕ್ಷದ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ಪಾಕಿಸ್ತಾನಿ ಪ್ರಾಯೋಜಿತ ಇಸ್ಲಾಮಿಕ್ ಉಗ್ರರ ದಾಳಿ ಆಗಿದೆ.
ಗಡಿಯಾಚೆಗಿನ ನುಸುಳುಕೋರರು ನಡೆಸಿರುವ ಈ ಕೃತ್ಯ ಈಗ ಕೇವಲ ರಾಷ್ಟ್ರೀಯ ಭದ್ರತೆಯ ಪ್ರಶ್ನೆಯಾಗಿ ಉಳಿದಿಲ್ಲ. ಇದು ಭಾರತದ ಸಾರ್ವಭೌಮತೆ, ಘನತೆಗೆ ಎಸೆದಿರುವ ಸವಾಲು. ಇಂತಹ ಸನ್ನಿವೇಶದಲ್ಲಿ ಇಡೀ ದೇಶವೇ ಪಕ್ಷಾತೀತವಾಗಿ ಒಂದು ದನಿಯಾಗಿರಬೇಕು” ಎಂದು ಹೇಳಿದ್ದಾರೆ.
”ಇದಕ್ಕಾಗಿಯೇ ಕೇಂದ್ರ ಸರ್ಕಾರ ಸರ್ವಪಕ್ಷ ಸಭೆ ನಡೆಸಿ, ಎಲ್ಲಾ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಿದೆ. ನಿಮ್ಮದೇ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕತ್ವ ಸೇರಿದಂತೆ ಎಲ್ಲ ಪಕ್ಷಗಳೂ ಸರ್ವಾನುಮತದಿಂದ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಯಾವುದೇ ನಿರ್ಧಾರವನ್ನು ಬೆಂಬಲಿಸುತ್ತೇವೆ ಎಂದು ಹೇಳಿವೆ” ಎಂದಿದ್ದಾರೆ.
”ನಮ್ಮ ದೇಶದಲ್ಲಿ ವೃತ್ತಿಪರ ಸೇನಾಪಡೆಗಳಿವೆ. ಯಾವ ಸಂದರ್ಭದಲ್ಲಿ ಎಂತಹ ಕ್ರಮ ಕೈಗೊಳ್ಳಬೇಕು ಎನ್ನುವ ಪರಿಣಿತಿ, ಅನುಭವ ನಮ್ಮ ಸೇನಾಪಡೆಗಿದೆ. ಈ ವಿಷಯದಲ್ಲಿ ನಿಮ್ಮ ಸಲಹೆಯ ಅಗತ್ಯವೂ ಇಲ್ಲ, ಸಲಹೆ ನೀಡುವ ಯಾವುದೇ ಅರ್ಹತೆಯೂ ತಮಗಿಲ್ಲ” ಎಂದು ವಾಗ್ದಾಳಿ ನಡೆಸಿದ್ದಾರೆ.