ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಸಿಕಂದರ್ ಸಿನಿಮಾ ಈದ್ ಹಬ್ಬದ ವಿಶೇಷವಾಗಿ ನಿನ್ನೆ ತೆರೆಗೆ ಬಂದಿದೆ. ದೊಡ್ಡ ಮಟ್ಟದಲ್ಲಿಯೇ ರಿಲೀಸ್ ಆಗಿರುವ ಸಿಕಂದರ್ ಸಿನಿಮಾ ಸೋಲಿನ ಸುಳಿಯಲ್ಲಿ ಸಿಲುಕಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಅದಕ್ಕೆ ಕಾರಣ ನಿರೀಕ್ಷಿಸಿದಷ್ಟು ಕಲೆಕ್ಷನ್ ನಿರ್ಮಾಪಕ ಜೇಬಿಗೆ ಬಿದ್ದಿಲ್ಲ. ಮೊದಲ ದಿನದ ಕಲೆಕ್ಷನ್ ನಲ್ಲಿಯೇ ಸಿಕಂದರ್ ಕಂಪ್ಲೀಟ್ ಡಲ್ ಹೊಡೆದಿದೆ.
ನಿನ್ನೆ ಬಿಡುಗಡೆಯಾದ ‘ಸಿಕಂದರ್’ ಚಿತ್ರ ಬಿಡುಗಡೆಯಾದ ಚಿತ್ರದ ಬಜೆಟ್‌ನ ಶೇಕಡಾ 20ರಷ್ಟು ಮೊತ್ತವನ್ನೂ ಸಂಗ್ರಹಿಸಿಲ್ಲವಂತೆ. ಚಿತ್ರ ನೋಡಿದವರಿಗೂ ಇಷ್ಟವಾಗಿಲ್ಲ. ಇನ್ನೂ, ಆನ್‌ಲೈನ್ ನಲ್ಲಿ ಇಡೀ ಚಿತ್ರ ಸೋರಿಕೆ ಕಂಡಿದ್ದು, ಇದು ನಿರ್ಮಾಪಕರಿಗೆ ದೊಡ್ಡ ಪೆಟ್ಟು ಬಿದ್ದಂತಿದೆ.
ಸಾಜಿದ್ ನಾಡಿಯಾಡ್ವಾಲಾ 200 ಕೋಟಿ ಬಜೆಟ್‌ನಲ್ಲಿ ಸಿಕಂದರ್ ಸಿನಿಮಾವನ್ನು ನಿರ್ಮಿಸಿದ್ದಾರೆ. ಈ ಚಿತ್ರವು ಮೊದಲ ದಿನ ಭಾರತದಲ್ಲಿ ಕೇವಲ 26 ಕೋಟಿ ರೂಪಾಯಿಗಳನ್ನು ಗಳಿಸಿದೆ. ಸಲ್ಮಾನ್ ಖಾನ್ ಅವರ ಈ ಹಿಂದಿನ ಅಂದರೆ 2023ರಲ್ಲಿ ತೆರೆಗೆ ಬಂದಿದ್ದ ಟೈಗರ್ 3 ಸಿನಿಮಾ ಮೊದಲ ದಿನವೇ 44.50 ಕೋಟಿ ಗಳಿಕೆ ಮಾಡಿತ್ತು.
2014ರಲ್ಲಿ ಸಲ್ಲು ನಟನೆಯ ಕಿಕ್ ಸಿನಿಮಾ ತೆರೆಗೆ ಬಂದಿತ್ತು. ಆ ಸಿನಿಮಾ ಮೊದಲ ದಿನವೇ 26.40 ಕೋಟಿ ಗಳಿಕೆ ಮಾಡಿತ್ತು. ಅಲ್ಲಿಂದ ಪ್ರತಿ ವರ್ಷ ತೆರೆಗೆ ಬರುವ ಸಿನಿಮಾಗಳು ಏರಿಕೆ ಹಾದಿಯಲ್ಲಿ ಸಾಗಿದ್ದವು. ಇದೀಗ ಸಿಕಂದರ್ ಕಲೆಕ್ಷನ್ ಲೆಕ್ಕಾಚಾರದಲ್ಲಿ ದಿಢೀರ್ ಕುಸಿತ ಕಂಡಿದೆ. ಹತ್ತು ವರ್ಷದ ಹಿಂದೆ ತೆರೆಕಂಡಿದ್ದ ಸಿನಿಮಾಕ್ಕಿಂತಲೂ ಸಿಕಂದರ್ ಸಿನಿಮಾ ಕಡಿಮೆ ಕಲೆಕ್ಷನ್ ಮಾಡಿದೆ. ಬರೀ 26 ಕೋಟಿಯಷ್ಟೆ ಗಳಿಕೆ ಕಂಡಿದೆ.
ಎ.ಆರ್ .ಮುರುಗದಾಸ್ ನಿರ್ದೇಶನದಲ್ಲಿ ಸಿಕಂದರ್ ಮೂಡಿಬಂದಿದೆ. ದಕ್ಷಿಣದವರಾದ ಮುರುಗದಾಸ್ ಈ ಹಿಂದೆ ಆಮೀರ್ ಖಾನ್ ಗೆ ಘಜನಿ ಚಿತ್ರ ಮಾಡಿದ್ದರು. ಸಾಲು ಸಾಲು ಸೋಲುಗಳನ್ನು ಕಂಡಿರುವ ಸಲ್ಮಾನ್ ಖಾನ್ ಗೆಲುವಿಗಾಗಿ ದಕ್ಷಿಣದ ಮುರುಗದಾಸ್ ಹಿಂದೆ ಬಿದ್ದಿದ್ದರು. ಹೀಗಾಗಿ ಪೀಕ್ ನಲ್ಲಿರುವ ನಟಿ ರಶ್ಮಿಕಾ ಮಂದಣ್ಣರನ್ನು ನಾಯಕಿಯಾಗಿ ಮಾಡಿದ್ದರು. ಆದರೆ ಈ ಸೌತ್ ಫಾರ್ಮುಲಾ ವರ್ಕೌಟ್ ಆಗಿಲ್ಲ. ಸಿಕಂದರ್ ಸೈ ಎನಿಸಿಕೊಳ್ಳುವಲ್ಲಿ ಸೋತು ಹೋಗಿದ್ದು, ಕಲೆಕ್ಷನ್ ನಲ್ಲಿ ಬಿಕೋ ಎನ್ನುತ್ತಿದೆ.