ಕೋಲಾರ: ಮೋದಿಯವರ ದಿಟ್ಟ ನಾಯಕತ್ವದಿಂದ ಯೋಧರು ನಿರ್ಭೀತಿಯಿಂದ ಉಗ್ರಗಾಮಿಗಳ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾದ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ. ಕೋಲಾರಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಭಾರತ- ಪಾಕಿಸ್ತಾನದ ನಡುವೆ ಒಂದು ರೀತಿ ಯುದ್ಧ ಪ್ರಾರಂಭವಾದ ಇಂಥ ಸಂದರ್ಭದಲ್ಲಿ ಪ್ರತಿಯೊಬ್ಬ ಭಾರತೀಯರೂ ಒಂದಾಗಿ ಇರಬೇಕು ಎಂದು ತಿಳಿಸಿದರು.
ರಾಜಕೀಯ ಪಕ್ಷಗಳೂ ಒಟ್ಟಾಗಿ, ಒಂದಾಗಿ ದೇಶದ ಜೊತೆ ನಿಲ್ಲಬೇಕು ಎಂದು ಬಿ.ವೈ.ವಿಜಯೇಂದ್ರ ಅವರು ಮನವಿ ಮಾಡಿದರು. ಈ ಸದುದ್ದೇಶ ಇಟ್ಟುಕೊಂಡಿದ್ದೇವೆ. ನಿಗದಿಯಂತೆ ಕೋಲಾರದಲ್ಲಿ ಇವತ್ತು ಜನಾಕ್ರೋಶ ಯಾತ್ರೆ ನಡೆಯಲಿದೆ. ನಾಳೆಯಿಂದ ನಡೆಯಬೇಕಿದ್ದ ಕಾರ್ಯಕ್ರಮಗಳನ್ನು ತಾತ್ಕಾಲಿಕವಾಗಿ ಮುಂದೂಡುತ್ತಿದ್ದೇವೆ ಎಂದು ಪ್ರಕಟಿಸಿದರು.
ಇನ್ನು ರಾಜ್ಯ ಕಾಂಗ್ರೆಸ್ ನಾಯಕರು ಯಾವ ರೀತಿ ಟ್ವೀಟ್ ಮಾಡಿದ್ದಾರೋ ಇದಕ್ಕೆ ಸ್ಪಷ್ಟನೆ ನೀಡಬೇಕು. ಕಾಂಗ್ರೆಸ್ಸಿನವರು ಉಗ್ರರ ಪರವಾಗಿ ಇದ್ದಾರಾ? ಭಾರತದ ಪರವಾಗಿ ಇದ್ದಾರಾ? ಅಥವಾ ಪಾಕಿಸ್ತಾನದ ಪರವಾಗಿದ್ದಾರೋ ಎಂಬುದನ್ನು ಸ್ಪಷ್ಟಪಡಿಸಬೇಕಿದೆ ಎಂದು ಆಗ್ರಹಿಸಿದರು.
ಉಗ್ರರಿಗೆ ತಕ್ಕ ಶಾಸ್ತಿ ಮಾಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅದಕ್ಕೆ ಪೂರಕವಾಗಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು. ನಿನ್ನೆ ಮಧ್ಯರಾತ್ರಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಉಗ್ರರ ಅಡಗುತಾಣಗಳ ಮೇಲೆ ಕಾರ್ಯಾಚರಣೆ ನಡೆಸಿದ್ದು, ಪ್ರತಿಯೊಬ್ಬ ಭಾರತೀಯರಲ್ಲಿ ಹೆಮ್ಮೆ, ಸಂತಸಕ್ಕೆ ಕಾರಣವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ತಿಳಿಸಿದ್ದಾರೆ.