ಬೆಂಗಳೂರು:- ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತಕ್ಕೆ ಪ್ರಮುಖ ಕಾರಣ ಬೆಳಕಿಗೆ ಬಂದಿದೆ.
ಪೊಲೀಸರ ಸಲಹೆ ಧಿಕ್ಕರಿಸಿ ತಕ್ಷಣದ ಸಂಭ್ರಮಾಚರಣೆ ಮಾಡಿದ್ದೇ ಘಟನೆಗೆ ಪ್ರಮುಖ ಕಾರಣವಾಯಿತು ಎಂಬುದೂ ಇದರಿಂದ ತಿಳಿದುಬಂದಿದೆ. ತಕ್ಷಣವೇ ಸಂಭ್ರಮಾಚರಣೆ ಕಾರ್ಯಕ್ರಮ ಆಯೋಜಿಸುವ ಬದಲು ಒಂದು ವಾರದ ನಂತರ ಮಾಡುವಂತೆ ಸಲಹೆ ನೀಡಲಾಗಿತ್ತು. ಆದರೆ ಅದನ್ನು ಕಡೆಗಣಿಸಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಬೇಸರ ವ್ಯಕ್ತಪಡಿಸಿರುವುದಾಗಿ ಪತ್ರಿಕಾ ವರದಿಯೊಂದು ಉಲ್ಲೇಖಿಸಿದೆ.
ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಗೆಲುವಿಗೆ ಸಂಬಂಧಿಸಿ ಬುಧವಾರ ಯಾವುದೇ ಕಾರ್ಯಕ್ರಮಗಳನ್ನು ನಡೆಸದಂತೆ ಮಂಗಳವಾರ ರಾತ್ರಿಯಿಂದಲೇ ಸರ್ಕಾರ ಮತ್ತು ಫ್ರಾಂಚೈಸಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದೆವು. ಜನರ ಭಾವನೆ, ಉದ್ವೇಗ ತುಸು ತಣ್ಣಗಾದ ನಂತರ ಕಾರ್ಯಕ್ರಮ ಆಯೋಜಿಸುವುದು ಸೂಕ್ತ ಎಂಬ ಸಲಹೆ ನೀಡಿದ್ದೆವು. ಮುಂದಿನ ಭಾನುವಾರ ಕಾರ್ಯಕ್ರಮ ಆಯೋಜಿಸಲು ಶಿಫಾರಸು ಮಾಡಿದ್ದೆವು ಎಂದು ಬೆಳವಣಿಗೆಗಳ ಬಗ್ಗೆ ಮಾಹಿತಿಯುಳ್ಳ ಉನ್ನತ ಅಧಿಕಾರಿ ಹೇಳಿದ್ದಾರೆ.
ಪೊಲೀಸ್ ಅಧಿಕಾರಿಗಳ ಸಲಹೆ ನಂತರವೂ ಸರ್ಕಾರ ಮತ್ತು ಆರ್ಸಿಬಿ ಆಡಳಿತ ಮಂಡಳಿ ಬುಧವಾರವೇ ಸಂಭ್ರಮಾಚರಣೆ ಕಾರ್ಯಕ್ರಮ ಆಯೋಜಿಸಲು ಮುಂದಾದವು ಎಂದು ವರದಿ ತಿಳಿಸಿದೆ. ಆಟಗಾರರು, ವಿಶೇಷವಾಗಿ ವಿದೇಶಿ ಆಟಗಾರರು ಇಂದು ಅಥವಾ ನಾಳೆ ಹೊರಡುತ್ತಾರೆ ಎಂಬುದು ಅವರ ವಾದವಾಗಿತ್ತು. ಸಾಮಾನ್ಯವಾಗಿ, ಸರ್ಕಾರವು ಇಂಥ ಕಾರ್ಯಕ್ರಮಗಳ ಪ್ರಯೋಜನ ಪಡೆಯಲು ಬಯಸುತ್ತದೆ. ಒಂದು ವೇಳೆ ಸಂಭ್ರಮಾಚರಣೆಗೆ ಸರ್ಕಾರ ನಿರಾಕರಿಸಿದ್ದರೆ, ಅದು ಮತ್ತೊಂದು ರೀತಿಯ ಅವ್ಯವಸ್ಥೆಗೆ ಕಾರಣವಾಗುತ್ತಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.