ಬೆಂಗಳೂರು:- ಅಂತೂ ಇಂತೂ ಬೇಸಿಗೆ ಮುಗಿದು ಶಾಲೆಗಳು ಆರಂಭವಾಗಿದೆ. ಮಕ್ಕಳೆಲ್ಲಾ ಖುಷಿಯಾಗಿ ಶಾಲೆಗೆ ಹಾಜರಾಗುತ್ತಿದ್ದಾರೆ. ವಿಶೇಷ ಎಂಬಂತೆ ಈ ಬಾರಿ ಸರ್ಕಾರಿ ಶಾಲೆಗೆ ದಾಖಲಾಗಿರುವವರ ಸಂಖ್ಯೆ ಹೆಚ್ಚಿದ್ದು, ಒಂದು ರೀತಿ ಇದು ಖುಷಿಯ ವಿಚಾರ. ಇದೀಗ ಶಾಲೆಗಳಲ್ಲಿ ಹೊಸ ರೂಲ್ಸ್ ಜಾರಿಯಾಗಿದೆ.
ಕರ್ನಾಟಕದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಮಕ್ಕಳ ಹಾಜರಾತಿಗೆ ಇನ್ಮುಂದೆ ಆನ್‌ಲೈನ್ ಸಿಸ್ಟಮ್ ಜಾರಿಯಾಗಲಿದೆ. ಪ್ರಸಕ್ತ ವರ್ಷದಿಂದಲೇ ಎಐ ಫೇಶಿಯಲ್ ರಿಕಗ್ನಿಷನ್ ತಂತ್ರಜ್ಞಾನ ಆಧಾರಿತ ಹಾಜರಾತಿ ವ್ಯವಸ್ಥೆ ಜಾರಿಗೆ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು, 2025-26ನೇ ಶೈಕ್ಷಣಿಕ ಸಾಲಿನಿಂದಲೇ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ. ಹೀಗಾಗಿ ಪ್ರಸಕ್ತ ವರ್ಷದಿಂದ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹೆಸರು ಕೂಗಿ ಹಾಜರಾತಿ ಪಡೆಯುವ ಬದಲಾಗಿ, ಶಿಕ್ಷಕರು ಮೊಬೈಲ್‌ನಲ್ಲಿ ವಿದ್ಯಾರ್ಥಿಗಳ ಫೋಟೋ ಕ್ಲಿಕ್ಕಿಸಿಕೊಳ್ಳುವ ಮೂಲಕ ಹಾಜರಾತಿ ದಾಖಲಿಸಿಕೊಳ್ಳಲಿದ್ದಾರೆ.
ಮೊಬೈಲ್ ಆಧಾರಿತ AI-Driven Facial Recognition Attendance system ಇದಾಗಿದೆ. ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಈ ವ್ಯವಸ್ಥೆ ಜಾರಿಯಾಗುತ್ತಿದ್ದು, 52,686 ಶಾಲೆಗಳಲ್ಲಿ ಆನ್‌ಲೈನ್ ಹಾಜರಾತಿ ವ್ಯವಸ್ಥೆ ಬರಲಿದೆ. ‘ನಿರಂತರ’ ಯೋಜನೆಯಡಿ ರಾಜ್ಯದ 40,74,525 ಸರ್ಕಾರಿ ಹಾಗೂ 11,81,213 ಅನುದಾನಿತ ಸೇರಿ ಒಟ್ಟು 52,686 ಶಾಲೆಗಳ 52 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಹಾಜರಾತಿಯನ್ನು ಕೃತಕ ಬುದ್ಧಿಮತ್ತೆ ಚಾಲಿತ, ಮುಖ ಚಹರೆ ಗುರುತು ಆಧಾರಿತವಾಗಿ (ಎಐ ಫೇಶಿಯಲ್ ರಿಕಗ್ನಿಷನ್) ತೆಗೆದುಕೊಳ್ಳಲಾಗುತ್ತದೆ.
ಸುಮಾರು 5 ಕೋಟಿ ರೂ. ವೆಚ್ಚದ ಈ ಯೋಜನೆಯನ್ನು ಕರ್ನಾಟಕ ಸ್ಟೇಟ್ ಡೇಟಾ ಸೆಂಟರ್ (ಕೆಎಸ್‌ಡಿಸಿ) ಮೂಲಕ ನಿರ್ವಹಣೆ ಮಾಡಲಾಗುತ್ತದೆ. ಇದಕ್ಕಾಗಿ ಸಾಫ್ಟ್‌ವೇರ್ ಕೂಡ ಸಿದ್ಧಪಡಿಸಲಾಗುತ್ತಿದೆ. ಇದು ಗರಿಷ್ಠ ಗೌಪ್ಯತೆ ಮತ್ತು ಸುರಕ್ಷತೆ ಕಾಪಾಡುತ್ತದೆ. ಪ್ರಸಕ್ತ ವರ್ಷದಿಂದಲೇ ಇ-ಹಾಜರಾತಿ ಜಾರಿಗೆ ಬರಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶದಲ್ಲಿ ತಿಳಿಸಲಾಗಿದೆ.
ಪ್ರತಿನಿತ್ಯ ತ್ವರಿತವಾಗಿ ನಿಖರ ಹಾಜರಾತಿಯಿಂದ ಸಂಬಂಧಿಸಿದ ಶಾಲೆಯ ವ್ಯವಸ್ಥೆ ಸುಧಾರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ. ಪ್ರಸ್ತುತ ಕೈಯಿಂದ ಬರೆಯುವ ಹಾಜರಾತಿಯಲ್ಲಿನ ನ್ಯೂನತೆಗಳು, ನಕಲಿ ಹಾಜರಾತಿ ತಪ್ಪಿಸಬಹುದು. ನಿಖರವಾದ ಮಾಹಿತಿ ರಿಯಲ್ ಟೈಮ್‌ನಲ್ಲಿ ಲಭ್ಯವಾಗುವುದರಿಂದ ಮಕ್ಕಳ ಹಾಜರಾತಿಯ ಮೇಲ್ವಿಚಾರಣೆ ಸಾಧ್ಯವಾಗಲಿದೆ. ಹಾಜರಾತಿ ಹೆಸರಲ್ಲಿ ಅನಗತ್ಯ ಮತ್ತು ಹೆಚ್ಚುವರಿ ಅನುದಾನ ಹಂಚಿಕೆ ಕೂಡ ಗಣನೀಯವಾಗಿ ತಡೆಗಟ್ಟಬಹುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.