ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಡೆವಿಲ್ ಸಿನಿಮಾದ ಮೂರನೇ ಹಂತದ ಚಿತ್ರೀಕರಣ ರಾಜಸ್ಥಾನದಲ್ಲಿ ಭರದಿಂದ ಸಾಗುತ್ತಿದೆ. ಇತ್ತೀಚೆಗೆ ಮೈಸೂರಿನಲ್ಲಿ ಶೂಟಿಂಗ್ ಮುಗಿಸಿ ರಾಜಸ್ಥಾನಕ್ಕೆ ಹಾರಿದ್ದ ಚಿತ್ರತಂಡ ಅಲ್ಲಿ ಒಂದು ವಾರ ಚಿತ್ರೀಕರಣ ನಡೆಸಿದೆ. ಇಂದು ರಾಜಸ್ಥಾನದಲ್ಲಿ ಡೆವಿಲ್ ಚಿತ್ರದ ಮೂರನೇ ಹಂತದ ಚಿತ್ರೀಕರಣ ಮುಕ್ತಾಯಗೊಳ್ಳಲಿದ್ದು, ನಾಳೆ ದರ್ಶನ್ ಅಂಡ್ ಟೀಂ ಬೆಂಗಳೂರಿಗೆ ಬರಲಿದ್ದಾರೆ.
ಡೆವಿಲ್ ಚಿತ್ರದ ಮುಂದಿನ ಹಂತದ ಚಿತ್ರೀಕರಣ ಹೈದ್ರಾಬಾದ್ ನಲ್ಲಿ ನಡೆಯಲಿದೆಯಂತೆ. ಈ ವರ್ಷವೇ ಸಿನಿಮಾವನ್ನು ತೆರೆಗೆ ತರಲು ಚಿತ್ರತಂಡ ಭರದಿಂದ ಶೂಟಿಂಗ್ ಮಾಡ್ತಿದೆ. ಒಂದ್ಕಡೆ ಸಿನಿಮಾದ ಶೂಟಿಂಗ್ ಕೆಲಸದ ನಡುವೆ ದರ್ಶನ್ ಗೆ ಮತ್ತೊಮ್ಮೆ ಟೆನ್ಷನ್ ಶುರುವಾಗಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಇತರೆ ಆರೋಪಿಗಳಿಗೆ ಹೈಕೋರ್ಟ್ ನೀಡಿದ ಜಾಮೀನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್ ನಾಳೆ ನಡೆಸಲಿದೆ.
ಡಿಸೆಂಬರ್ ತಿಂಗಳಲ್ಲಿ ರಾಜ್ಯ ಹೈಕೋರ್ಟ್ ರೇಣುಕಾ ಸ್ವಾಮಿ ಕೊಲೆ ಆರೋಪಿಗಳಾದ ನಟ ದರ್ಶನ್, ಪವಿತ್ರಾ ಗೌಡ ಇನ್ನೂ ಕೆಲವರಿಗೆ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿತ್ತು. ಅದರ ಬೆನ್ನಲ್ಲೆ ಪೊಲೀಸ್ ಇಲಾಖೆಯು ಗೃಹ ಇಲಾಖೆಯ ಅನುಮತಿ ಪಡೆದು ಆರೋಪಿಗಳ ಜಾಮೀನು ರದ್ದು ಕೋರಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿಯ ವಿಚಾರಣೆ ಈ ವರೆಗೆ ನಡೆದಿರಲಿಲ್ಲ. ನಾಳೆ ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್ ನಲ್ಲಿ ನಡೆಯಲಿದೆ. ಹೈಕೋರ್ಟ್ನಲ್ಲಿ ಗೆಲುವು ಪಡೆದಂತೆ ಸುಪ್ರೀಂಕೋರ್ಟ್ನಲ್ಲಿಯೂ ಗೆಲುವು ಪಡೆಯಲು ಖ್ಯಾತ ಹಿರಿಯ ವಕೀಲ ಕಪಿಲ್ ಸಿಬಲ್ ಅವರನ್ನು ದರ್ಶನ್ ಕುಟುಂಬದವರು ನೇಮಿಸಿಕೊಂಡಿದೆ ಎನ್ನಲಾಗುತ್ತಿದೆ. ಸರ್ಕಾರದ ಪರವಾಗಿ ಅನಿಲ್ ಕುಮಾರ್ ನಿಶಾನಿ ಅವರು ವಾದಿಸುವ ಸಾಧ್ಯತೆ ಇದೆಯಂತೆ.
ಕಳೆದ ವರ್ಷ ಜೂನ್9 ರಂದು ಚಿತ್ರದುರ್ಗದ ರೇಣುಕಾ ಸ್ವಾಮಿಯ ಕೊಲೆಯಾಗಿತ್ತು. ಜೂನ್ 11 ರಂದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಇನ್ನೂ ಕೆಲವರನ್ನು ಬಂಧಿಸಿದ್ದರು. ನಟ ದರ್ಶನ್ 131 ದಿನಗಳ ಜೈಲುವಾಸದ ನಂತರ ವೈದ್ಯಕೀಯ ಕಾರಣಗಳನ್ನು ಉಲ್ಲೇಖಿಸಿ ಅ.30 ರಂದು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ನಂತರ ಹೈಕೋರ್ಟ್ ಡಿ.13 ರಂದು ದರ್ಶನ್ ಮತ್ತು ಪ್ರಮುಖ ಆರೋಪಿ ಪವಿತ್ರ ಗೌಡ ಸೇರಿದಂತೆ ಇತರ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿತ್ತು.