ಬೆಂಗಳೂರು:- ಕಾಶ್ಮೀರದ ಅಭಿವೃದ್ಧಿ ಸಹಿಸದ ಭಯೋತ್ಪಾದಕರಿಂದ ಪಹಲ್ಗಾಮ್ ನಲ್ಲಿ ಮಂಗಳವಾರ ಭೀಕರ ದಾಳಿ ನಡೆದಿದೆ ಎಂದು ಪರಿಷತ್ ಶಾಸಕ TA ಶರವಣ ಆಕ್ರೋಶ ಹೊರ ಹಾಕಿದ್ದಾರೆ.
ಉಗ್ರರ ಭೀಕರ ದಾಳಿ: ಕನ್ನಡಿಗರ ಮೃತದೇಹಗಳು ಬೆಂಗಳೂರಿಗೆ ಶಿಫ್ಟ್, ತವರಿನಲ್ಲಿ ಅಂತಿಮ ನಮನ!
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಪಹಲ್ಗಾಮ್ ನಲ್ಲಿ ಉಗ್ರರು ನಡೆಸಿದ ಪೈಶಾಚಿಕ ದಾಳಿ ಭಾರತದ ಸಾರ್ವಭೌಮತೆಗೆ ಮತ್ತು ಸಮಗ್ರತೆಗೆ ಉಂಟಾದ ಧಕ್ಕೆ. ಹೀಗಾಗಿ ಇದನ್ನು ಬಲವಾಗಿ ಖಂಡಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಮಂತ್ರಿ ಅಮಿತ್ ಶಾ ನೇತೃತ್ವದ ಕೇಂದ್ರದ ಎನ್.ಡಿ. ಎ ಸರ್ಕಾರ, ಅಧಿಕಾರಕ್ಕೆ ಬಂದು ಕಾಶ್ಮೀರದಲ್ಲಿ ರಾಜಕೀಯ ಪರಿವರ್ತನೆ ಆದ ಬಳಿಕ ಶಾಂತಿಯ ಹೊಸ ಕಳೆಯೇ ಅಲ್ಲಿ ಬಂದಿತ್ತು. ಕಾಶ್ಮೀರದ ಅಭಿವೃದ್ಧಿ ಸಹಿಸದ ಭಯೋತ್ಪಾದಕರು ಈ ಭೀಕರ ದಾಳಿ ನಡೆಸಿದ್ದು, ಇದರ ಹಿಂದಿನ ಸಂಚುಕೋರರನ್ನು ಸದೆಬಡಿಯಬೇಕೆಂದು ಶರವಣ ಅವರು ಒತ್ತಾಯಿಸಿದ್ದಾರೆ.
ಇದರಲ್ಲಿ ಕರ್ನಾಟಕದ ಮೂವರು ಬಲಿಯಾಗಿದ್ದು, ಅತ್ಯಂತ ನೋವಿನ ಸಂಗತಿ ಆಗಿದೆ. ಈ ಕುಟುಂಬಗಳಿಗೆ ಇಂಥ ದಾರುಣ ದುಃಖ ಭರಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು ಶರವಣ ಕಂಬನಿ ಮಿಡಿದಿದ್ದಾರೆ. ಕೇಂದ್ರ ಸರಕಾರ ಈ ಉಗ್ರರ ಕೃತ್ಯವನ್ನು ಹತ್ತಿಕ್ಕುವಲ್ಲಿ ಹಲವು ಕ್ರಮಗಳನ್ನು ಮುಲಾಜಿಲ್ಲದೆ ತೆಗೆದುಕೊಂಡಿದೆ. ಧರ್ಮದ ಹೆಸರಲ್ಲಿ ಇಂಥ ಹಿಂಸೆ ಮತ್ತು ರಕ್ತ ಪಿಪಾಸುತನವನ್ನು ಯಾರೂ ಮಾಡಬಾರದು. ಈ ನೀಚ ಕೆಲಸ ಮಾಡಿರುವ ಉಗ್ರರ ಗುಂಪಿಗೆ ತಕ್ಕ ಎದುರೇಟು ಕೇಂದ್ರ ಕೊಟ್ಟೆ ಕೊಡುತ್ತದೆ ಎಂದು ಶರವಣ ಭರವಸೆ ವ್ಯಕ್ತಪಡಿಸಿದ್ದಾರೆ.
ಇನ್ನೂ ಕಾಶ್ಮೀರಕ್ಕೆ ತೆರಳಿ ಅಲ್ಲಿ ಸಿಲುಕಿದ್ದ ಪ್ರವಾಸಿ ಕನ್ನಡಿಗರಿಗೆ ನೆರವು ನೀಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಂಸದ ತೇಜಸ್ವಿ ಸೂರ್ಯ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.