ಬೆಂಗಳೂರು:- ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿ ಚೊಚ್ಚಲ ಐಪಿಎಲ್ ಟ್ರೋಫಿಗೆ ಮುತ್ತಿಟ್ಟಿದೆ. RCB ಕಪ್ ಗೆದ್ದ ಬೆನ್ನಲ್ಲೇ ತಂಡಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.
RCB ಮುಡಿಗೆ ಐಪಿಎಲ್ ಪಟ್ಟ: ಯಶಸ್ವಿ ನಾಯಕನಾಗಿ ಹೊರಹೊಮ್ಮಿದ ರಜತ್ ಪಾಟಿದಾರ್!
ಎಕ್ಸ್ ಪೋಸ್ಟ್ ಮೂಲಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ. ಕೆ. ಶಿವಕುಮಾರ್ ಸೇರಿ ಸಚಿವರುಗಳು ಐಪಿಎಲ್ ಚಾಂಪಿಯನ್ ಆರ್ ಸಿಬಿಗೆ ಅಭಿನಂದನೆ ಸಲ್ಲಿಸಿದ್ದಾರೆ
ಸಿದ್ದರಾಮಯ್ಯ ಹೇಳಿದ್ದೇನು?
ಐತಿಹಾಸಿಕ ಐಪಿಎಲ್ ಗೆಲುವಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಅಭಿನಂದನೆಗಳು. ಅಂತಿಮವಾಗಿ ಕನಸು ನನಸಾಗಿದೆ. ಈ ಸಲ ಕಪ್ ನಮ್ಮದೇ. ಈ ಗೆಲುವು ಕರ್ನಾಟಕ ಹಾಗೂ ವಿಶ್ವದಾದ್ಯಂತದ ಅಭಿಮಾನಿಗಳನ್ನು ಹೆಮ್ಮೆಯನ್ನು ಇಮ್ಮಡಿಗೊಳಿಸಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಐಪಿಎಲ್ ಫೈನಲ್ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಬಗ್ಗುಬಡಿದು ಕಪ್ ಮುಡಿಗೇರಿಸಿಕೊಂಡ ಆರ್‌ಸಿಬಿ ತಂಡಕ್ಕೆ ಅಭಿನಂದನೆಗಳು. ಇಡೀ ಪಂದ್ಯಾವಳಿಯಲ್ಲಿ ಒಂದು ತಂಡವಾಗಿ ಸಂಘಟಿತ ಪ್ರದರ್ಶನ ನೀಡುವ ಮೂಲಕ ಕೋಟ್ಯಂತರ ಅಭಿಮಾನಿಗಳ ಕನಸನ್ನು ಈ ದಿನ ಆರ್‌ಸಿಬಿಯ ಹುಡುಗರು ನನಸಾಗಿಸಿದ್ದಾರೆ. ಆರ್‌ಸಿಬಿಯ ಈ ವಿಜಯದಲ್ಲಿ ವಿರಾಟ್ ಕೋಹ್ಲಿಯ 18 ವರ್ಷಗಳ ಕಾಲದ ತಪಸ್ಸಿದೆ, ನಿಷ್ಠೆ, ಬದ್ಧತೆಯಿದೆ. ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್ ಹೀಗೆ ಎಲ್ಲಾ ವಿಭಾಗದಲ್ಲೂ ಆರ್‌ಸಿಬಿ ಪ್ರತಿ ಆಟಗಾರರು ಚಾಂಪಿಯನ್ ಪ್ರದರ್ಶನ ನೀಡಿದ್ದಾರೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಇದು ಇತಿಹಾಸ ಸೃಷ್ಟಿಸಿದ ದಿನ. ಕೊನೆಯದಾಗಿ, ಈ ಸಲ ಕಪ್ ನಮ್ದೆ ಎಂದು ಸಂತೋಷ ಹೊರಹಾಕಿದ್ದಾರೆ.
ಡಿಸಿಎಂ ಡಿ ಕೆ ಶಿವಕುಮಾರ್ ಅಭಿನಂದನೆ: ಇತ್ತ ಐಪಿಎಲ್ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮಣಿಸಿ ಐಪಿಎಲ್ ಟ್ರೋಫಿ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೃದಯಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ. 18 ವರ್ಷಗಳ ಕನಸು ನನಸು ಮಾಡಿದ ಆರ್ ಸಿ ಬಿ ತಂಡಕ್ಕೆ ಹೃತ್ಪೂರ್ವಕ ಶುಭಾಶಯ ತಿಳಿಸಿರುವ ಡಿ ಕೆ ಶಿವಕುಮಾರ್ ಅವರು, “ಈ ಸಲ ಕಪ್ ನಮ್ದೇ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಸಚಿವ ಕೃಷ್ಣ ಬೈರೇಗೌಡ ಅಭಿನಂದನೆ ಸಲ್ಲಿಸುತ್ತಾ, ಹಲವು ವರ್ಷಗಳ ನಿರೀಕ್ಷೆ, ಹೃದಯ ಬಡಿತ ಮತ್ತು ಅಚಲ ನಂಬಿಕೆ ಬಳಿಕ ಕಾಯುವಿಕೆ ಅಂತ್ಯವಾಗಿದೆ. ಆರ್ ಸಿಬಿ 2025 ಐಪಿಎಲ್ ಚಾಂಪಿಯನ್ ಆಗಿದ್ದಾರೆ. ಈ ಜಯಭೇರಿ ಕೇವಲ ಆಟಗಾರರಿಗೆ ಮಾತ್ರವಲ್ಲ, ಪ್ರತಿಯೊಬ್ಬ ಅಭಿಮಾನಿ ಬಳಗಕ್ಕೆ ಸಲ್ಲುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ