ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ‘ಭಾರತ, ಪಾಕಿಸ್ತಾನ ಪೂರ್ಣ ಮತ್ತು ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ’ ಎಂದು ಹೇಳಿದ್ದಾರೆ. ಅಮೆರಿಕದ ಮಧ್ಯಸ್ಥಿಕೆ ಮಾತುಕತೆಗಳಿಂದಾಗಿ ಎರಡೂ ದೇಶಗಳು ದಾಳಿಯನ್ನು ನಿಲ್ಲಿಸಲು ಒಪ್ಪಿವೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಇಂದು ಸಂಜೆ 5 ಗಂಟೆಯಿಂದಲೇ ಕದಮ ವಿರಾಮ ಘೋಷಣೆ ಮಾಡಿರುವುದಾಗಿ ಭಾರತ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಹೇಳಿದ್ದಾರೆ.
ಭಾರತ-ಪಾಕಿಸ್ತಾನ ನಡುವಿನ ಉದ್ವಿಗ್ನತೆಗೆ ಸಂಬಂಧಿಸಿದಂತೆ ಭಾರತ ವಿದೇಶಾಂಗ ಕಾರ್ಯದರ್ಶಿ ಮಾದ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು, ಭಾರತ-ಪಾಕ್ ನಡುವೆ ಕದನ ವಿರಾಮ ಒಪ್ಪಂದವಾಗಿದ್ದು, ಇಂದು ಸಂಜೆ 5 ಗಂಟೆಯಿಂದ ಸೇನಾ ಕಾರ್ಯಾಚರಣೆ ಸ್ಥಗಿತ ಮಾಡಲಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಹೇಳಿದ್ದಾರೆ.
ಭಾರತ-ಪಾಕ್ ಕದನಕ್ಕೆ ವಿರಾಮ: ಉಭಯ ರಾಷ್ಟ್ರಗಳ ಸಮ್ಮತಿ – ಟ್ರಂಪ್ ಘೋಷಣೆ
ಮಾತ್ರವಲ್ಲ ಈ ಕುರಿತು ಹೆಚ್ಚಿನ ಮಾಹಿತಿಯನ್ನು ಮೇ 12 ರಂದು ನೀಡಲಾಗುವುದು ಎಂದು ಕೂಡ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು. ಏಪ್ರಿಲ್ 22 ರಂದು ಪಾಕಿಸ್ತಾನ ಮೂಲದ ಭಯೋತ್ಪಾದಕರು ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿನ ಬೈಸರನ್ ಕಣಿವೆಯಲ್ಲು ಬರೋಬ್ಬರಿ 26 ಜನ ಅಮಾಯಕರನ್ನು ಹತ್ಯೆ ಮಾಡಿದ್ದಕ್ಕೆ ಪ್ರತಿಯಾಗಿ ಭಾರತ ಭಯೋತ್ಪಾದಕರ ನೆಲೆಗಳನ್ನು ಉಡೀಸ್ ಮಾಡಿತ್ತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಭಾರತೀಯ ನಾಗರೀಕರ ಮೇಲೆ ದಾಳಿ ನಡೆಸಿತ್ತು.