ಬೆಳಗಾವಿ : ಹಾಸನದಲ್ಲಿ ಅತಿ ಹೆಚ್ಚಾಗಿ ವರದಿಯಾಗಿದ್ದ ಹೃದಯಾಘಾತ ಪ್ರಕರಣ ಇದೀಗ ರಾಜ್ಯವ್ಯಾಪಿ ಆತಂಕ ಸೃಷ್ಟಿಸುತ್ತಿವೆ. ಅದರಲ್ಲೂ ಕೆಲವೊಂದು ಜಿಲ್ಲೆಗಳಲ್ಲಿ ಕಳೆದ ವರ್ಷಗಳಲ್ಲಿ ವರದಿಯಾಗಿರುವ ಹೃದಯಸ್ತಂಭನ ಪ್ರಕರಣಗಳು ನಿಜಕ್ಕೂ ಆತಂಕ ಸೃಷ್ಟಿಸಿದೆ. ಆದರೆ ಕೆಲವೊಂದು ಜಿಲ್ಲೆಗಳಲ್ಲಿ ಹಾರ್ಟ್‌ಗೆ ಸಂಬಂಧ ಪಟ್ಟ ವೈದ್ಯರೇ ಇಲ್ಲ ಅನ್ನೋದು ಮಾತ್ರ ಅಚ್ಚರಿಯ ಸಂಗತಿಯಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಎರಡು ವರ್ಷದ ಅವಧಿಯಲ್ಲಿ ಬರೋಬ್ಬರಿ 27 ಜನ ಹಾರ್ಟ್ ಅಟ್ಯಾಕ್ ದಿಂದ ಸಾವನ್ನಪ್ಪಿದ್ದಾರೆ. ಈ ಸಂಖ್ಯೆ ನಿಜಕ್ಕೂ ದಿಗಿಲು ಹುಟ್ಟಿಸಿದೆ. ಆದರೆ ಜಿಲ್ಲೆಯಲ್ಲಿ ಹೃದಯ ತಪಾಸಣೆಗೆಂದು ಒಬ್ಬರೇ ವೈದ್ಯರಿದ್ದಾರೆ. ಈ ಬಗ್ಗೆ ಬೆಳಗಾವಿ ಡಿಎಚ್ಒ ಈಶ್ವರ್ ಗಡಾದ ಅವರು ಮಾತನಾಡಿ, ಬಿಮ್ಸ್ ಆಸ್ಪತ್ರೆಯಲ್ಲಿ ಕಾರ್ಡಿಯಾಕ್ ಒಬ್ಬರೇ ವೈದ್ಯರಿದ್ದಾರೆ. ಹೃದಯ ಸಂಬಂಧಿ ಕಾಯಿಲೆ ಶಸ್ತ್ರಚಿಕಿತ್ಸೆ ಮಾಡುವ ನಿಟ್ಟಿನಲ್ಲಿ ವ್ಯವಸ್ಥೆಯೂ ಇಲ್ಲ̤. ಜಿಲ್ಲೆಯಲ್ಲಿ ಪುನೀತ್ ರಾಜ್‍ಕುಮಾರ್ ಜೀವನ ಜ್ಯೋತಿ ಕಾರ್ಯಕ್ರಮ ಯಶಸ್ವಿ ಜಾರಿ ಮಾಡಲಾಗಿದ್ದು, 20,300 ಜನರಿಗೆ ಟೆಸ್ಟ್ ಮಾಡಿ 179 ಜನರನ್ನ ಕೆಎಲ್ಇ ಆಸ್ಪತ್ರೆಗೆ ರೆಫರ್ ಮಾಡಲಾಗಿದೆ. ಇದರಲ್ಲಿ 106ಜನರಿಗೆ ಹೃದಯ ಸಂಬಂಧಿ ಕಾಯಿಲೆ ದೃಢವಾಗಿದೆ ಎಂದು ಮಾಹಿತಿ ನೀಡಿದ್ದಾರೆ.