ಮಂಗಳೂರು: ಮಂಗಳೂರಿನಲ್ಲಿ ನಡೆದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಭೀಕರ ಹತ್ಯೆ ಪ್ರಕರಣ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದೀಗ ಸುಹಾಶ್ ಹತ್ಯೆ ಪ್ರಕರಣದ ಬೆನ್ನಲ್ಲೇ ಮಂಗಳೂರಿನ ಸುತ್ತಮುತ್ತ ಮೂವರಿಗೆ ಚಾಕು ಇರಿತವಾಗಿದೆ.
ನಗರದ ಹೊರವಲಯದ ಕಣ್ಣೂರಿನಲ್ಲಿ ಮುಂಜಾನೆ 3 ಗಂಟೆಗೆ ಯುವಕನೊಬ್ಬನಿಗೆ ಚಾಕು ಇರಿಯಲಾಗಿದೆ. ಐವರು ದುಷ್ಕರ್ಮಿಗಳು, ನಗರದ ಮಾರುಕಟ್ಟೆ ಕೆಲಸಕ್ಕೆ ಹೋಗುತ್ತಿದ್ದ ಇರ್ಶಾದ್ ಎಂಬ ಯುವಕನ ಮೇಲೆ ದಾಳಿ ಮಾಡಿ ಚಾಕು ಇರಿದಿದ್ದಾರೆ. ಈ ವೇಳೆ ಅಲ್ಲೇ ಇದ್ದ ಮನೆಯೊಳಗೆ ಹೋಗಿ ಇರ್ಶಾದ್ ಜೀವ ಉಳಿಸಿಕೊಂಡಿದ್ದಾನೆ.
ಇನ್ನೊಂದೆಡೆ ಕೊಂಚಾಡಿ ಹಾಗೂ ಉಳ್ಳಾಲದಲ್ಲಿ ಸಹ ಇಬ್ಬರಿಗೆ ಚಾಕು ಇರಿಯಲಾಗಿದೆ. ತಡರಾತ್ರಿ ಈ ದಾಳಿ ನಡೆದಿದ್ದು, ಮೂವರು ಗಾಯಾಳುಗಳಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಸುಹಾಸ್ ಶೆಟ್ಟಿ ಹತ್ಯೆಯನ್ನು ಖಂಡಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಮಂಗಳೂರಿನಲ್ಲಿ ಅಹಿತಕರ ಘಟನೆಗಳು ನಡೆಯದಂತೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.