ಜನರ ಮನರಂಜನೆಗಾಗಿ ನಮ್ಮಲ್ಲಿ ಹಲವಾರು ಕಲಾಪ್ರಕಾರಗಳಿವೆ. ಒಂದಕ್ಕಿಂತ ಒಂದು ವಿಶೇಷವಾಗಿರುವ ಈ ಕಲೆಗಳು ಜನರಿಗೆ ಮನರಂಜನೆ ನೀಡುವ ಜೊತೆಗೆ ಅವರಲ್ಲಿರುವ ಸೃಜನಶೀಲತೆಯನ್ನು ಅರಳಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತವೆ. ರಂಗಭೂಮಿ ಚಟುವಟಿಕೆ ನಿರತರಿಗೂ ಒಂದು ಸ್ಮರಣೀಯ ದಿನ ಬೇಕು ಎನ್ನುವ ಕಾರಣಕ್ಕೆ ಪ್ರತಿವರ್ಷ ಮಾರ್ಚ್ 27ರಂದು ಇಂಟರ್ ನ್ಯಾಷನಲ್ ಥಿಯೇಟರ್ ಇನ್‌ಸ್ಟಿಟ್ಯೂಟ್‌ನ ಕೇಂದ್ರಗಳು,
ಐಟಿಐ ಸಹಕಾರ ಸದಸ್ಯರು, ರಂಗಭೂಮಿ ವೃತ್ತಿಪರರು, ರಂಗಭೂಮಿ ಸಂಘಟನೆಗಳು ಮತ್ತು ರಂಗಭೂಮಿ ಪ್ರೇಮಿಗಳಿಂದ ವಿಶ್ವ ರಂಗಭೂಮಿ ದಿನವನ್ನು ಭಾರತ ಸೇರಿದಂತೆ ವಿಶ್ವದ ನಾನಾ ಭಾಗದಲ್ಲಿ ಆಚರಿಸಲಾಗುತ್ತದೆ.
ಒಂದು ನಾಟಕ ಅಥವಾ ರಂಗ ಕಲೆಯು ಉತ್ತಮವಾದ ಸಾಮಾಜಿಕ ಸಂದೇಶಗಳನ್ನು ನೀಡುವುದರ ಜೊತೆಗೆ ಜನರನ್ನು ಒಂದು ಅದೃಶ್ಯವಾದ ಲೋಕಕ್ಕೆ ಕರೆದೊಯ್ಯುತ್ತದೆ. ಇಲ್ಲಿ ಬರುವ ಒಂದೊಂದು ಪಾತ್ರಗಳನ್ನು ಜನರು ತಮ್ಮ ಬದುಕಿಗೆ ಹೋಲಿಸಿ ನೋಡುತ್ತಾರೆ. ಕೆಲವು ಪಾತ್ರಗಳನ್ನು ತಮ್ಮ ಬದುಕಿಗೆ ಅನ್ವಯಿಸಿಕೊಂಡು ಬಿಡುತ್ತಾರೆ. ಜನರ ಯೋಚನಾ ಶಕ್ತಿಯನ್ನು ಬದಲಿಸುವ ಸಾಮರ್ಥ್ಯ ನಾಟಕಗಳಿಗಿವೆ.
ವಾಸ್ತು ಪ್ರಕಾರ ಈ ದಿಕ್ಕಿನಲ್ಲಿ ಮಲಗಿ: ಜೀವನದಲ್ಲಿ ಅನಿರೀಕ್ಷಿತ ಅದೃಷ್ಟ ನಿಮ್ಮದಾಗುತ್ತೆ.!
ಆದ್ದರಿಂದ ಇದು ಕಲೆಯ ಒಂದು ಸಮರ್ಥ ಮಾಧ್ಯವಾಗಿದೆ. ನಮ್ಮ ಜಗತ್ತಿನಲ್ಲಿ ರಂಗಭೂಮಿ ಅಥವಾ ನಾಟಕಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇದು ಹಳೆಯ ಕಲಾ ಪ್ರಕಾರವಾಗಿದ್ದರೂ ಈಗಿನ ಆಧುನಿಕ ಪ್ರಪಂಚದಲ್ಲೂ ಒಂದು ಸಮರ್ಥವಾದ ಕಲಾ ಮಾಧ್ಯಮವಾಗಿ ಬೆಳೆದಿದೆ.
ನ್ಯಾಷನಲ್ ಥಿಯೇಟರ್ ಇನ್‌ಸ್ಟಿಟ್ಯೂಟ್ 1961ರಲ್ಲಿ ವ್ಯವಸ್ಥೆಗೊಳಿಸಿದ ವಿಶ್ವ ರಂಗಭೂಮಿ ಸಮಾವೇಶದಲ್ಲಿ ಪ್ರತಿವರ್ಷ ಮಾರ್ಚ್ 27ರಂದು ವಿಶ್ವ ರಂಗಭೂಮಿ ದಿನ ಆಚರಿಸಲು ನಿರ್ಧರಿಸಲಾಯಿತು. 1962ರಲ್ಲಿ ಪ್ಯಾರಿಸ್‌ನಲ್ಲಿ ಅಂತಾರಾಷ್ಟ್ರೀಯ ನಾಟಕೋತ್ಸವದ ಉದ್ಘಾಟನೆಯೊಂದಿಗೆ ಮೊದಲ ವಿಶ್ವ ರಂಗಭೂಮಿ ದಿನವನ್ನು ಆಚರಿಸಲಾಯಿತು.
ಒಂದು ಪ್ರದೇಶದ ಜನಸಮುದಾಯದ ಬದುಕಿನ ಸಾಂಸ್ಕೃತಿಕ, ರಾಜಕೀಯ, ಇತಿಹಾಸದೊಂದಿಗೆ ಸಾಹಿತ್ಯ ಕೃತಿಯಾಗಿ, ರಂಗವೇದಿಕೆಯಲ್ಲಿ ನಾಟಕದ ರೂಪಕವಾಗಿ ಜನಮನಕ್ಕೆ ಹತ್ತಿರವಾದ ಕಲಾಕ್ಷೇತ್ರವನ್ನು ರಂಗಭೂಮಿ ಎನ್ನಲಾಗುತ್ತದೆ. ಜಗತ್ತಿನಾದ್ಯಂತ ಆಯಾ ಜನಾಂಗ, ದೇಶ, ಪ್ರದೇಶಗಳಲ್ಲಿ ರಂಗಭೂಮಿ ರೂಪು ಗೊಂಡಿದೆ. ಇದನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.
ಕಲೆಯ ರೂಪ , ಥಿಯೇಟರ್‌ನ ಮೌಲ್ಯ ಮತ್ತು ಪ್ರಾಮುಖ್ಯತೆಯನ್ನು ನೋಡುಗರಿಗೆ ತಿಳಿಸಲು ಹಾಗೂ ಅದರ ಮೌಲ್ಯವನ್ನು ಗುರುತಿಸದೆ ಇರುವ ಸರ್ಕಾರ, ರಾಜಕಾರಣಿಗಳಿಗೆ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ.
ಪ್ಯಾರಿಸ್‌ನಲ್ಲಿ ಮುಖ್ಯ ಕಚೇರಿ ಹೊಂದಿರುವ ಐಎನ್‌ಟಿಯು ಪ್ರತಿವರ್ಷ ವಿಶ್ವದ ಯಾವುದಾದರೊಂದು ಭಾಷೆಯ ಹೆಸರಾಂತ ನಟ, ನಾಟಕಕಾರ, ನಿರ್ದೇಶಕ ಅಥವಾ ಸಂಘಟಕನಿಗೆ ಒಂದು ಸಂದೇಶ ಕೊಡುವಂತೆ ಕೇಳಿಕೊಂಡು ಅದನ್ನು ವಿಶ್ವದೆಲ್ಲೆಡೆ ಪಸರಿಸುತ್ತದೆ. ವಿಶ್ವದ ನಾನಾ ಭಾಷೆಯ ರಂಗಕರ್ಮಿಗಳು ಇಂದು ಈ ಸಂದೇಶ ಓದಿ ನಾಟಕ ಪ್ರಯೋಗ ಇತ್ಯಾದಿ ಉತ್ಸವ ಆಚರಿಸುತ್ತಾರೆ. ಕರ್ನಾಟಕದಲ್ಲೂ ವಿವಿಧ ರಂಗ ಸಂಸ್ಥೆಗಳು ವಿಶೇಷ ರಂಗಪ್ರಯೋಗಗಳೊಂದಿಗೆ ಈ ವಿಶೇಷ ದಿನವನ್ನು ಸಂಭ್ರಮದಿಂದ ಆಚರಿಸುತ್ತವೆ.