ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ಎ2 ಆರೋಪಿ ದರ್ಶನ್ ನಿನ್ನೆ ವಿಚಾರಣೆಗೆ ಗೈರಾಗಿದ್ದು, ಈ ಬಗ್ಗೆ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಮುಂದಿನ ವಿಚಾರಣೆ ಕಡ್ಡಾಯವಾಗಿ ಹಾಜರಾಗಲೇಬೇಕೆಂದು ಸೂಚಿಸಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದ ವಿಚಾರಣೆ ನಿನ್ನೆ ಬೆಂಗಳೂರಿನ ಸಿಸಿಎಚ್ 57ನೇ ನ್ಯಾಯಾಲಯದಲ್ಲಿ ನಡೆಯಿತು, ನಟ ದರ್ಶನ್ ಹೊರತುಪಡಿಸಿ ಎಲ್ಲಾ ಆರೋಪಿಗಳು ವಿಚಾರಣೆ ಹಾಜರಾಗಿದ್ದರು. ಆದ್ರೆ, ಬೆನ್ನು ನೋವಿನ ಕಾರಣ ಹೇಳಿ ದರ್ಶನ್ ವಿಚಾರಣೆಗೆ ಗೈರಾಗಿದ್ದರು. ಈ ಬೆಳವಣಿಗೆ ನಡುವೆ ಇಂದು ದರ್ಶನ್ ಶಿಷ್ಯನ ಸಿನಿಮಾ ವೀಕ್ಷಣೆಗೆ ಸಜ್ಜಾಗಿದ್ದಾರೆ.
ದರ್ಶನ್ ಜೈಲು ಸೇರಿದ ಮೇಲೆ ವಿಜಯಲಕ್ಷ್ಮೀ ನೆರಳಾಗಿ ನಿಂತು ಸ್ವಂತ ತಮ್ಮನಂತೆ ಜೈಲು, ಮನೆ ಕೋರ್ಟ್, ಕೇಸ್ ಅಂತಾ ಓಡಿದ್ದು ಡಿ ಪಡೆಯ ಒಬ್ಬನೇ ಒಬ್ಬ ಹುಡ್ಗ ಧ್ವನೀರ್. ಧನ್ವೀರ್ ನಟನೆಯ ವಾಮನ ಸಿನಿಮಾ ನಾಳೆ ತೆರೆಗೆ ಬರ್ತಿದೆ. ಹೀಗಾಗಿ ಇಂದು ವಾಮನ ಪ್ರೀಮಿಯರ್ ಶೋ ಆಯೋಜಿಸಲಾಗಿದೆ. ಬೆಂಗಳೂರಿನ ಮಾಗಡಿ ರಸ್ತೆಯ ಜಿಟಿ ಮಾಲ್ ನಲ್ಲಿಂದು ಸಂಜೆ 6.30ಕ್ಕೆ ವಾಮನ ಸಿನಿಮಾವನ್ನು ನಟ ದರ್ಶನ್ ನೋಡಲಿದ್ದಾರೆ. ಸ್ವತಃ ದರ್ಶನ್ ಒಡೆತನದ ತೂಗುದೀಪ ಡೈನೆಸ್ಟಿ ಈ ಮಾಹಿತಿಯನ್ನು ಹಂಚಿಕೊಂಡಿದೆ. ದರ್ಶನ್ ಜೊತೆ ವಿಜಯಲಕ್ಷ್ಮೀ ಕೂಡ ವಾಮನ ಚಿತ್ರ ನೋಡಬಹುದು. ನಿನ್ನೆ ಕೊಲೆ ಪ್ರಕರಣದ ವಿಚಾರಣೆ ಗೈರಾಗಿದ್ದ ದರ್ಶನ್ ಇಂದು ಸಿನಿಮಾ ನೋಡೋದಿಕ್ಕೆ ಹೊರಟಿರುವುದು ಚರ್ಚೆಗೆ ಗ್ರಾಸವಾಗಿದೆ. ಕೋರ್ಟ್ ಗೆ ಬರೋದಿಕ್ಕೆ ಬೆನ್ನು ನೋವು. ಆದರೆ ಮೂರು ಗಂಟೆ ಕೂತು ಸಿನಿಮಾ ನೋಡೋದಿಕ್ಕೆ ಇರೋಲ್ವಾ ಅಂತಾ ಪ್ರಶ್ನೆಗಳನ್ನು ನೆಟ್ಟಿಗರು ಕೇಳುತ್ತಿದ್ದಾರೆ.
ಟ್ರೇಲರ್ ರಿಲೀಸ್ ಮಾಡಿದ್ದ ದಾಸ
ವಾಮನ ಸಿನಿಮಾದ ಟ್ರೇಲರ್ ಇವೆಂಟ್ ನ್ನು ಕಳೆದ ತಿಂಗಳ 27ರಂದು ಬೆಂಗಳೂರಿನ ಪ್ರಸನ್ನ ಥಿಯೇಟರ್ ನಲ್ಲಿ ಏರ್ಪಡಿಸಲಾಗಿತ್ತು. ಈ ಅದ್ಧೂರಿ ಇವೆಂಟ್ ಗೆ ದರ್ಶನ್ ಬರಲಿದ್ದಾರೆ ಎನ್ನಲಾಗಿತ್ತು. ಆದರೆ ದರ್ಶನ್ ರಾಜಸ್ಥಾನದಲ್ಲಿ ಡೆವಿಲ್ ಶೂಟಿಂಗ್ ನಲ್ಲಿ ಭಾಗಿಯಾದ ಕಾರಣ ಟ್ರೇಲರ್ ಲಾಂಚ್ ಕಾರ್ಯಕ್ರಮಕ್ಕೆ ಆಗಮಿಸಿರಲಿಲ್ಲ. ಆದರೆ ಟ್ರೇಲರ್ ನೋಡಿ ಒಂದು ವಿಡಿಯೋ ಬೈಟ್ ಕೊಟ್ಟು, ಧ್ವನೀರ್ ಚಿತ್ರಕ್ಕೆ ಸಾಥ್ ಕೊಟ್ಟಿದ್ದರು.
ಹಾಡು ರಿಲೀಸ್ ಮಾಡಿದ್ದ ವಿಜಯಲಕ್ಷ್ಮಿ
ವಾಮನ ಸಿನಿಮಾದ ತಾಯಿ ಸೆಂಟಿಮೆಂಟ್ ಹಾಡನ್ನು ವಿಜಯಲಕ್ಷ್ಮೀ ದರ್ಶನ್ ರಿಲೀಸ್ ಮಾಡಿ ಧ್ವನೀರ್ ಗೆ ಸಾಥ್ ಕೊಟ್ಟಿದ್ದರು. ಹೀಗಾಗಿ ಇಂದು ವಾಮನ ಪ್ರೀಮಿಯರ್ ಶೋಗೆ ವಿಜಯಲಕ್ಷ್ಮೀ ಕೂಡ ಆಗಮಿಸುವ ಸಾಧ್ಯತೆ ಹೆಚ್ಚಿದೆ.