ಬಾಗಲಕೋಟೆ: ಮಲಪ್ರಭಾ ನದಿಯಲ್ಲಿ ಮುಳುಗುತ್ತಿದ್ದ ಯುವಕನ ರಕ್ಷಣೆ ಮಾಡಲು ಹೋಗಿ ಸೈನಿಕ ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಮಣ್ಣೇರಿ ಗ್ರಾಮದಲ್ಲಿ ನಡೆದಿದೆ.
ಹಂಸನೂರ ಗ್ರಾಮದ ಶೇಖಪ್ಪ ಮುತ್ತಪ್ಪ ಮೂಲಿಮನಿ(15), ಗದಗ ಜಿಲ್ಲೆಯ ರೋಣ ತಾಲೂಕಿನ ಬೆನಹಾಳ ಗ್ರಾಮದ ಸೈನಿಕ ಮಹಾಂತೇಶ ಹೂವಪ್ಪ ಹೊಸಮನಿ(25) ಮೃತರಾಗಿದ್ದಾರೆ.
ಶೇಖಪ್ಪ ಮುತ್ತಪ್ಪ ಮೂಲಿಮನಿ ನದಿಯಲ್ಲಿ ಸ್ನಾನ ಮಾಡಲು ಹೋಗಿದ್ದ. ಈ ವೇಳೆ ಈಜು ಬಾರದ ಶೇಖಪ್ಪ ರಕ್ಷಣೆಗಾಗಿ ಕೂಗಿದ್ದು, ಈ ವೇಳೆ ಆತನ ರಕ್ಷಣೆಗಾಗಿ ಮಹಾಂತೇಶ ತೆರಳಿದಾಗ ಶೇಖಪ್ಪ ಗಾಬರಿಯಿಂದ ಮಹಾಂತೇಶ ಕುತ್ತಿಗೆಯನ್ನು ಬಿಗಿಯಾಗಿ ಹಿಡಿಕೊಂಡಿದ್ದಾನೆ. ಇದರಿಂದ ಮಹಾಂತೇಶಗೆ ಈಜಲು ಸಾಧ್ಯವಾಗದೇ ಇಬ್ಬರು ಮೃತಪಟ್ಟಿದ್ದಾರೆ.
ಇಬ್ಬರ ಮೃತದೇಹಗಳನ್ನು ನದಿಯಿಂದ ಹೊರ ತೆಗೆಯಲಾಗಿದೆ. ಇನ್ನೂ ಘಟನೆ ಕುರಿತು ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.