ದುನಿಯಾ ವಿಜಯ್ ಕುಮಾರ್ ಭೀಮ, ಸಲಗ ಸೂಪರ್ ಸಕ್ಸಸ್ ಬಳಿಕ ಮತ್ತೊಮ್ಮೆ ಡೈರೆಕ್ಟರ್ ಕ್ಯಾಪ್ ತೊಟ್ಟು ಅಖಾಡಕ್ಕೆ ಇಳಿದಿದ್ದಾರೆ. ಒಂದ್ಕಡೆ ಜಡೇಶ್ ಹಂಪಿ ನಿರ್ದೇಶನದ ಲ್ಯಾಂಡ್ ಲಾರ್ಡ್ ಚಿತ್ರದಲ್ಲಿ ಬ್ಯುಸಿಯಾಗಿರುವ ಅವರು ಮತ್ತೊಂದ್ಕಡೆ ಸಿಟಿ ಲೈಟ್ಸ್ ಚಿತ್ರ ನಿರ್ದೇಶಿಸುತ್ತಿದ್ದಾರೆ.
ಈ ಚಿತ್ರದ ಮೂಲಕ ತಮ್ಮ ಎರಡನೇ ಪುತ್ರಿ ಮೋನಿಶಾ ಅವರನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ದೊಡ್ಮನೆ ಕುಡಿ ವಿನಯ್ ರಾಜ್ ಕುಮಾರ್ ನಾಯಕನಾಗಿ ಹಾಗೂ ಮೋನಿಶಾ ನಾಯಕಿಯಾಗಿ ಅಭಿನಯಿಸುತ್ತಿರುವ ಸಿಟಿ ಲೈಟ್ಸ್ ದುನಿಯಾಗೀಗ ಹಿರಿಯ ನಟಿ ಉಮಾಶ್ರೀ ಎಂಟ್ರಿ ಕೊಟ್ಟಿದ್ದಾರೆ.
ಯಾವುದೇ ಪಾತ್ರ ಕೊಟ್ಟರು ನೀರು ಕುಡಿದಂತೆ ನಟಿಸುವ ಉಮಾಶ್ರೀ ವಿಜಯ್ ಕುಮಾರ್ ನಿರ್ದೇಶನದ ಸಿಟಿ ಲೈಟ್ಸ್ ಭಾಗವಾಗಿದ್ದಾರೆ. ಪವರ್ ಫುಲ್ ಮಾತ್ರದಲ್ಲಿ ಅವರು ಅಭಿನಯಿಸಲಿದ್ದು, ವಿಜಯ್ ಆಕ್ಷನ್ ಕಟ್ ಹೇಳಲಿದ್ದಾರೆ. ಉಮಾಶ್ರೀ ಅವರನ್ನು ಚಿತ್ರಕ್ಕೆ ಭೀಮ ಸ್ವಾಗತಿಸಿದ್ದು, ಆ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ವಿಜಯ್ ಕುಮಾರ್ ಈ ಹಿಂದೆ ನಿರ್ದೇಶನ ಮಾಡಿದ್ದ ಸಲಗ, ಭೀಮ ಸಿನಿಮಾದಲ್ಲಿ ನಗರ ಜೀವನದ ಒಳಹುಗಳನ್ನು ಬಿಚ್ಚಿಟ್ಟಿದ್ದರು. ಈ ಬಾರಿಯೂ ಸಹ ಸಿಟಿ ಲೈಟ್ಸ್ ಮೂಲಕ ಸಿಟಿಯ ಮತ್ತೊಂದು ಮಜಲನ್ನು ತೆರೆದೆಡಲಿದ್ದಾರೆ. ಸಲಗ, ಭೀಮ ಸಿನಿಮಾಗಳಲ್ಲಿ ಮಾಸ್ತಿ ಅವರ ಸಂಭಾಷಣೆ ಮತ್ತು ಚರಣ್ ರಾಜ್ ಸಂಗೀತ ಪ್ರಮುಖ ಪಾತ್ರ ವಹಿಸಿದ್ದವು. ಈ ಬಾರಿಯೂ ಆ ಮ್ಯಾಜಿಕ್ ಮುಂದುವರೆಯಲಿದೆ. ಇನ್ನು ಈ ಸಿನಿಮಾದಲ್ಲಿ ಹಲವು ವಿಶೇಷ ಪಾತ್ರಗಳಿದ್ದು, ಅವುಗಳಲ್ಲಿ ಅನೇಕ ಹೊಸ ಕಲಾವಿದರು ಕಾಣಸಿಕೊಳ್ಳುತ್ತಿರುವುದು ವಿಶೇಷ. ಕಾಕ್ರೋಚ್ ಖ್ಯಾತಿಯ ಸುಧಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.