ಹುಬ್ಬಳ್ಳಿ : ಗೃಹ ಮತ್ತು ಸೌಂದರ್ಯ ವಿಭಾಗಗಳಲ್ಲಿ ತಂತ್ರಜ್ಞಾನ ಆಧಾರಿತ, ಪೂರ್ಣ ಪ್ರಮಾಣದ ಆನ್ಲೈನ್ ಸೇವೆಗಳ ಮಾರುಕಟ್ಟೆ ನಿರ್ವಹಿಸುವ ಅರ್ಬನ್ ಲಿಮಿಟೆಡ್ ಕಂಪನಿ ಆರಂಭಿಕ ಸಾರ್ವಜನಿಕ ನೀಡಿಕೆ (ಐಪಿಒ) ಮೂಲಕ ಪ್ರಾಥಮಿಕ ಮಾರಕಟ್ಟೆಯಿಂದ ಬಂಡವಾಳ ಸಂಗ್ರಹಿಸಲು ಭಾರತದ ಷೇರು ನಿಯಂತ್ರಣ ಮಂಡಳಿಗೆ ತನ್ನ ಕರಡು ಪ್ರಸ್ತಾವನೆ ಸಲ್ಲಿಸಿದೆ.
ಕಂಪನಿ ತಲಾ ₹ 1 ಮುಖಬೆಲೆಯ ಈಕ್ವಿಟಿ ಷೇರುಗಳ ಆರಂಭಿಕ ಸಾರ್ವಜನಿಕ ಕೊಡುಗೆ ಮೂಲಕ ₹ 1,900 ಕೋಟಿವರೆಗಿನ ಬಂಡವಾಳ ಸಂಗ್ರಹಿಸಲು ಉದ್ದೇಶಿಸಿದೆ. ಈ ಕೊಡುಗೆಯು ₹ 429 ಕೋಟಿವರೆಗಿನ ಒಟ್ಟು ಮೊತ್ತದ ಹೊಸ ಷೇರುಗಳ ವಿತರಣೆ ಮತ್ತು ₹ 1,471 ಕೋಟಿವರೆಗಿನ ಒಟ್ಟು ಮೊತ್ತದ ಷೇರುದಾರರ ಮಾರಾಟ ಕೊಡುಗೆಯನ್ನು ಇದು ಒಳಗೊಂಡಿದೆ.
ಕಂಪನಿಯ ಪ್ರವರ್ತಕರು: ಅಭಿರಾಜ್ ಸಿಂಗ್ ಭಾಲ್ (ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ), ರಾಘವ್ ಚಂದ್ರ (ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಮುಖ್ಯ ತಂತ್ರಜ್ಞಾನ ಮತ್ತು ಉತ್ಪನ್ನ ಅಧಿಕಾರಿ) ಮತ್ತು ವರುಣ್ ಖೈತಾನ್ (ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಮುಖ್ಯ ಕಾರ್ಯಾಚರಣಾ ಅಧಿಕಾರಿ).ರೆಡ್ಸೀರ್ ವರದಿಯ ಪ್ರಕಾರ, 2024ರ ಡಿಸೆಂಬರ್ 31ಕ್ಕೆ ಕೊನೆಗೊಂಡ ಒಂಬತ್ತು ತಿಂಗಳಲ್ಲಿ, ನಿವ್ವಳ ವಹಿವಾಟು ಮೌಲ್ಯ ಆಧರಿಸಿ ಹೇಳುವುದಾದರೆ, ಕಂಪನಿಯು ಭಾರತದಲ್ಲಿ ಗೃಹ ಮತ್ತು ಸೌಂದರ್ಯ ವಿಭಾಗಗಳಿಗೆ ಸಂಬಂಧಿಸಿದ ಸೇವೆ ಒದಗಿಸುವ ಪೂರ್ಣ-ಪ್ರಮಾಣದ ಪ್ರಮುಖ ಆನ್ಲೈನ್ ವೇದಿಕೆಯಾಗಿದೆ.
ಕಂಪನಿಯು ಭಾರತ, ಅರಬ್ ಅಮೀರರ ಒಕ್ಕೂಟ (ಯುಎಇ), ಸಿಂಗಪುರ ಮತ್ತು ಸೌದಿ ಅರೇಬಿಯಾದ (ಕೆಎಸ್ಎ) ಒಟ್ಟು 59 ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಇವುಗಳಲ್ಲಿ 48 ನಗರಗಳು ಭಾರತದಲ್ಲಿಯೇ ಇವೆ. 2024ರ ಡಿಸೆಂಬರ್ 31ರ ವೇಳೆಗೆ ಕಂಪನಿಯ ವೇದಿಕೆಯು ಶುಚಿಗೊಳಿಸುವಿಕೆ, ಕೀಟ ನಿಯಂತ್ರಣ, ಎಲೆಕ್ಟ್ರಿಷಿಯನ್, ಪ್ಲಂಬಿಂಗ್, ಮರಗೆಲಸ, ಗೃಹೋಪಯೋಗಿ ಸಲಕರಣೆಗಳ ಸರ್ವೀಸ್ ಹಾಗೂ ದುರಸ್ತಿ, ಚಿತ್ರಕಲೆ, ಚರ್ಮದ ಆರೈಕೆ, ಕೂದಲಿನ ಅಂದಗೊಳಿಸುವಿಕೆ ಮತ್ತು ಮಸಾಜ್ ಚಿಕಿತ್ಸೆ ಸೇರಿದಂತೆ ವಿವಿಧ ಬಗೆಯ ಸೇವೆಗಳಿಗೆ ಸುಲಭವಾಗಿ ಬೇಡಿಕೆ ಸಲ್ಲಿಸಲು ಅನುವು ಮಾಡಿಕೊಡುತ್ತದೆ.
ತರಬೇತಿ ಪಡೆದ ಮತ್ತು ಸ್ವತಂತ್ರ ಸೇವಾ ವೃತ್ತಿಪರರು ಈ ಎಲ್ಲ ಸೇವೆಗಳನ್ನು ಗ್ರಾಹಕರ ಅನುಕೂಲಕ್ಕೆ ಅನುಗುಣವಾಗಿ ನೆರವೇರಿಸುತ್ತಾರೆ. 2023 ಮತ್ತು 2024 ರ ಹಣಕಾಸು ವರ್ಷದಲ್ಲಿ, ಅರ್ಬನ್ ಕಂಪನಿಯು ‘ನೇಟಿವ್’ ಬ್ರ್ಯಾಂಡ್ ಹೆಸರಿನಲ್ಲಿ ಕ್ರಮವಾಗಿ ಮನೆ ಬಳಕೆಯ ವಾಟರ್ ಪ್ಯುರಿಫೈಯರ್ಸ್ ಮತ್ತು ಎಲೆಕ್ಟ್ರಾನಿಕ್ ಡೋರ್ ಲಾಕ್ಗಳನ್ನು ಪರಿಚಯಿಸುವುದರೊಂದಿಗೆ ಗೃಹೋಪಯೋಗಿ ಸಲಕರಣೆಗಳಿಗೆ ತನ್ನ ವಹಿವಾಟು ವಿಸ್ತರಿಸಿದೆ.
ʼಸೆಬಿʼಗೆ ಸಲ್ಲಿಸಿರುವ ʼಐಪಿಒʼ ಕರಡು ಪ್ರಸ್ತಾವದ ಈಕ್ವಿಟಿ ಷೇರುಗಳ ಕೊಡುಗೆ ಮೂಲಕ ಬಂಡವಾಳ ಸಂಗ್ರಹಿಸಿದ ನಂತರ ಕಂಪನಿಯ ಷೇರುಗಳನ್ನು ಬಿಎಸ್ಇ ಮತ್ತು ಎನ್ಎಸ್ಇ ನಲ್ಲಿ ವಹಿವಾಟು ನಡೆಸಲು ಉದ್ದೇಶಿಸಲಾಗಿದೆ.
ಕೋಟಕ್ ಮಹೀಂದ್ರಾ ಕ್ಯಾಪಿಟಲ್ ಕಂಪನಿ, ಮೊರ್ಗನ್ ಸ್ಟ್ಯಾನ್ಲಿ ಇಂಡಿಯಾ ಕಂಪನಿ ಪ್ರೈವೇಟ್ ಲಿಮಿಟೆಡ್, ಗೋಲ್ಡ್ಮನ್ ಸ್ಯಾಚ್ಸ್ (ಇಂಡಿಯಾ) ಸೆಕ್ಯುರಿಟೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ಜೆಎಂ ಫೈನಾನ್ಶಿಯಲ್ ಲಿಮಿಟೆಡ್ ಈ ಷೇರು ನೀಡಿಕೆಗೆ ಬುಕ್ ರನ್ನಿಂಗ್ ಲೀಡ್ ಮ್ಯಾನೇಜರ್ಗಳಾಗಿವೆ.