ಈಗಾಗಲೇ ಸಕ್ಕರೆಕಾಯಿಲೆ ಇರುವವರು, ರಕ್ತದೊತ್ತದ ಇರುವವರು ಅದೇ ರೀತಿ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳನ್ನು ಹೊಂದಿದವರು, ಆದಷ್ಟು ಕಟ್ಟುನಿಟ್ಟಿನ ಆಹಾರ ಪದ್ಧತಿಯ ಜೊತೆಗೆ ಸರೊಯಾದ ಜೀವನಶೈಲಿಯನ್ನು ಅನುಸರಿಸಬೇಕು ಎಂದು ಆರೋಗ್ಯ ತಜ್ಞರೇ ಹೇಳುತ್ತಾರೆ
ಯಾಕೆಂದ್ರೆ ಈ ಕಾಯಿಲೆಗಳು ದೀರ್ಘಕಾಲದವರೆಗೆ ಕಾಡುವ ಬಹಳ ಅಪಾಯಕಾರಿ ಕಾಯಿಲೆ ಗಳು, ಸ್ವಲ್ಪ ನಿರ್ಲಕ್ಷ್ಯ ಮಾಡಿದರೂ ಕೂಡ, ಮುಂದಿನ ದಿನಗಳಲ್ಲಿ ಪ್ರಾಣಕ್ಕೆ ಅಪಾಯ ಎದುರಾಗುವ ಸಾಧ್ಯತೆ ಹೆಚ್ಚಿರುತ್ತದೆ. ಬನ್ನಿ ಇಂದಿನ ಲೇಖನದಲ್ಲಿ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆ ಇರುವ ವರು ಯಾವೆಲ್ಲಾ ಆಹಾರಗಳಿಂದ ದೂರ ಇರಬೇಕು ಎನ್ನುವುದರ ಬಗ್ಗೆ ನೋಡೋಣ ಬನ್ನಿ…
ನಮ್ಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು, ಕೆಲವು ಆಹಾರ ಪದಾರ್ಥಗಳನ್ನು ಸಂಪೂರ್ಣವಾಗಿ ತ್ಯಜಿಸುವುದು ಅಥವಾ ಅದರ ಸೇವನೆ ಪ್ರಮಾಣವನ್ನು ಕಡಿಮೆ ಮಾಡುವುದು ಬಹಳ ಅವಶ್ಯಕ. ಹಾಗಾದರೆ ಯಾವ ಆಹಾರಗಳ ಸೇವನೆ ಮಾಡುವುದು ನಮ್ಮ ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದನ್ನು ತಿಳಿದುಕೊಳ್ಳಿ.
ಫ್ರೆಂಚ್ ಫ್ರೈಸ್
ಬಿಸಿ ಎಣ್ಣೆಯಲ್ಲಿ ಕರಿದ ಆಲೂಗಡ್ಡೆ ನಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತ್ವರಿತವಾಗಿ ಹೆಚ್ಚಿಸುತ್ತದೆ. ಏಕೆಂದರೆ ಈ ತಿಂಡಿಯಲ್ಲಿ ಉಪ್ಪು ಮತ್ತು ಕೊಬ್ಬು ಅಧಿಕವಾಗಿದ್ದು, ಇದು ಹೃದಯದ ಆರೋಗ್ಯವನ್ನು ಹಾಳು ಮಾಡುತ್ತದೆ. ಇದನ್ನು ತಿನ್ನುವುದಕ್ಕೆ ತುಂಬಾ ಇಷ್ಟ ಎಂದು ಆಗಾಗ ಸೇವನೆ ಮಾಡುತ್ತಿದ್ದರೆ ಹೃದಯ ಸಂಬಂಧಿ ಕಾಯಿಲೆಗಳು ಬರುವ ಅಪಾಯ ಹೆಚ್ಚಾಗುತ್ತದೆ.
ಐಸ್ ಕ್ರೀಂ
ಸಾಮಾನ್ಯವಾಗಿ ಐಸ್ ಕ್ರೀಂ ಸೇವನೆ ಮಾಡುವುದಕ್ಕೆ ಎಲ್ಲರೂ ಇಷ್ಟಪಡುತ್ತಾರೆ. ಆದರೆ ಇದನ್ನು ಅತಿಯಾಗಿ ಸೇವನೆ ಮಾಡುವುದು ಒಳ್ಳೆಯದಲ್ಲ. ಏಕೆಂದರೆ ಇದರಲ್ಲಿ ಹೆಚ್ಚಿನ ಪ್ರಮಾಣದ ಸ್ಯಾಚುರೇಟೆಡ್ ಕೊಬ್ಬು ಮತ್ತು ಸಕ್ಕರೆ ಇರುತ್ತದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ತೂಕ ಹೆಚ್ಚಾಗುವುದರ ಜೊತೆಗೆ ಹೃದಯಾಘಾತದ ಅಪಾಯ ಕೂಡ ಹೆಚ್ಚಾಗುತ್ತದೆ.
ಪಿಜ್ಜಾ
ವೀಕೆಂಡ್ ಬಂದರೆ ಸಾಕು ಮನೆಯಲ್ಲಿ ಪಿಜ್ಜಾ ಪಾರ್ಟಿ ಮಾಡುವವರ ಸಂಖ್ಯೆ ಹೆಚ್ಚಾಗಿಯೇ ಇರುತ್ತದೆ. ಆದರೆ ಅದರಲ್ಲಿರುವ ಚೀಸ್, ಮಾಂಸ ಮತ್ತು ಸಂಸ್ಕರಿಸಿದ ಆಹಾರಗಳು ಹೆಚ್ಚಿನ ಪ್ರಮಾಣದ ಕೊಬ್ಬನ್ನು ಹೊಂದಿರುತ್ತವೆ. ಹಾಗಾಗಿ ಇವು ತುಂಬಾ ಇಷ್ಟ ಎಂದು ಪದೇ ಪದೇ ಸೇವನೆ ಮಾಡುವುದು ನಮ್ಮ ಆರೋಗ್ಯಕ್ಕೆ ಅದರಲ್ಲಿಯೂ ಹೃದಯಕ್ಕೆ ಒಳ್ಳೆಯದಲ್ಲ. ಹಾಗಾಗಿ ಎಲ್ಲಾದರೂ ಅಪರೂಪಕ್ಕೆ ಇದನ್ನು ಸೇವನೆ ಮಾಡುವುದು ಒಳ್ಳೆಯದು.
ತಂಪು ಪಾನೀಯ
ಸಾಮಾನ್ಯವಾಗಿ ಬಿಸಿ ಇರುವ ಆಹಾರಗಳಿಗಿಂತ ತಂಪಾಗಿರುವ ಆಹಾರಗಳನ್ನೇ ನಾವು ಹೆಚ್ಚಾಗಿ ಇಷ್ಟಪಡುತ್ತೇವೆ. ಅದರಲ್ಲಿಯೂ ಪದೇ ಪದೇ ತಂಪು ಪಾನೀಯಗಳ ಸೇವನೆ ಮಾಡುವುದರಿಂದ ಆರೋಗ್ಯ ಹಾಳಾಗುತ್ತದೆ ಎಂಬುದನ್ನು ನಾವು ಮರೆತಿರುತ್ತೇವೆ. ಸಾಮಾನ್ಯವಾಗಿ ನಾವು ಇಷ್ಟ ಪಟ್ಟು ಕುಡಿಯುವ ತಂಪು ಪಾನೀಯಗಳಲ್ಲಿರುವ ಹೆಚ್ಚಿನ ಸಕ್ಕರೆ ಮತ್ತು ಕಾರ್ಬೊನೇಟೆಡ್ ವಸ್ತುಗಳು ದೇಹವನ್ನು ನಿರ್ಜಲೀಕರಣಗೊಳಿಸುವುದಲ್ಲದೆ, ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುತ್ತವೆ, ಇದು ಚಯಾಪಚಯ ಕ್ರಿಯೆಯನ್ನು ದುರ್ಬಲಗೊಳಿಸುತ್ತದೆ.ಹಾಗಾಗಿ ಇವುಗಳ ಸೇವನೆ ಮಾಡುವುದರ ಬದಲಾಗಿ, ತಾಜಾ ಹಣ್ಣಿನ ರಸಗಳು ಮತ್ತು ನಿಂಬೆ ಹಣ್ಣಿನ ಜ್ಯೂಸ್ ಗಳನ್ನು ಕುಡಿಯುವುದು ಬಹಳ ಉತ್ತಮ.
ಸಂಸ್ಕರಿಸಿದ ಮಾಂಸಗಳು
ಸಾಮಾನ್ಯವಾಗಿ, ಬೇಕನ್ ಮತ್ತು ಸಾಸೇಜ್ಗಳಂತಹ ಸಂಸ್ಕರಿಸಿದ ಮಾಂಸಗಳು ಹೃದಯಕ್ಕೆ ಒಳ್ಳೆಯದಲ್ಲ. ಇವುಗಳ ನಿಯಮಿತ ಸೇವನೆಯು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಈಗಾಗಲೇ ಹೃದಯ ಸಂಬಂಧಿ ಸಮಸ್ಯೆಗಳನ್ನು ಹೊಂದಿರುವವರು ಅವುಗಳನ್ನು ಸಂಪೂರ್ಣವಾಗಿ ತಪ್ಪಿಸುವುದು ಬಹಳ ಒಳ್ಳೆಯದು.
ಕೋಳಿ ಮಾಂಸ
ಆರೋಗ್ಯಕ್ಕೆ ಕೋಳಿ ಮಾಂಸ ಒಳ್ಳೆಯದು ನಿಜ. ಆದರೆ, ಅದನ್ನು ಎಣ್ಣೆಯಲ್ಲಿ ಹುರಿಯುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಪರಿಣಾಮವಾಗಿ, ರಕ್ತನಾಳಗಳಲ್ಲಿ ಕೊಬ್ಬು ಸಂಗ್ರಹವಾಗುತ್ತದೆ. ಹುರಿಯುವ ಬದಲು, ಅದನ್ನು ಗ್ರಿಲ್ ಮಾಡಿ ತಿನ್ನುವುದು ಉತ್ತಮ. ಹೃದಯದ ಆರೋಗ್ಯವು ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಸರಿಯಾದ ಆಹಾರದ ಜೊತೆಗೆ ವ್ಯಾಯಾಮ, ನಿದ್ರೆ ಮತ್ತು ಒತ್ತಡ ನಿರ್ವಹಣೆಯಂತಹ ಅಂಶಗಳಿಗೆ ಗಮನ ಕೊಡುವ ಮೂಲಕ, ನಾವು ನಮ್ಮ ಹೃದಯವನ್ನು ಆರೋಗ್ಯವಾಗಿಡಬಹುದು. ಮೇಲೆ ಹೇಳಿರುವ ಆಹಾರಗಳ ಸೇವನೆ ಮಾಡುವುದನ್ನು ಕಡಿಮೆ ಮಾಡುವುದು ಅಥವಾ ಸಂಪೂರ್ಣವಾಗಿ ತ್ಯಜಿಸುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ