ವಿಜಯಪುರ : ವಿಜಯಪುರ ಜಿಲ್ಲೆಯಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ಹಲವು ಅಪರಾಧ ಪ್ರಕರಣಗಳು ದಾಖಲಾಗಿದ್ದವು. ಅವುಗಳನ್ನು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಕೋಟ್ಯಾಂತರ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದು ಇಂದು ವಾರಸುದಾರರಿಗೆ ಹಿಂತಿರುಗಿಸಿ ಕಾರ್ಯಕ್ಷಮತೆ ತೋರಿದ್ದಾರೆ.
ವಿಜಯಪುರ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಇಂದು ಬೆಳ್ಳಂ ಬೆಳಿಗ್ಗೆ ಪ್ರಾಪರ್ಟಿ ಪರೇಡ್ ನಡೆಸಿ ಪೊಲೀಸರು ವಾರಸುದಾರರಿಗೆ ಪ್ರಾಪರ್ಟಿ ವಾಪಸ್ ಕೊಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ನೇತೃತ್ವದಲ್ಲಿ ನಡೆದ ಪ್ರಾಪರ್ಟಿ ಪರೇಡ್ ನಲ್ಲಿ ಒಟ್ಟು 7,02,29,764 ರೂಪಾಯಿ ಕಿಮ್ಮತ್ತಿನ ವಸ್ತುಗಳನ್ನು ವಶಪಡಿಸಿಕೊಂಡಿದ್ದು ಪ್ರಾಪರ್ಟಿ ಪರೇಡ್ ಮೂಲಕ ಸಂಬಂಧಪಟ್ಟ 3,46,08,100 ರೂ ಕಿಮ್ಮತ್ತಿನ ವಸ್ತುಗಳನ್ನು ಹಿಂದಿರುಗಿಸಿದರು. ಕಳೆದ ಒಂದು ವರ್ಷದ ಅವಧಿಯಲ್ಲಿ ಸುಮಾರು 225 ಪ್ರಕರಣಗಳನ್ನು ಪತ್ತೆ ಮಾಡಿದ್ದು, ಒಟ್ಟು 345 ಆರೋಪಿತರನ್ನು ದಸ್ತಗಿರಿ ಮಾಡಿದ್ದಾರೆ.
ಅಪ್ರಾಪ್ತ ಬಾಲಕನಿಗೆ ಲೈಂಗಿಕ ದೌರ್ಜನ್ಯ ಪ್ರಕರಣ ; ಅಪರಾಧಿಗೆ ಜೀವಾವಧಿ ಶಿಕ್ಷೆ
ಇನ್ನೂ ಅಪರಾಧ ಪ್ರಕರಣಗಳ ವಿವರ ನೋಡುವದಾದ್ರೆ 97 ಬಂಗಾರ ಬೆಳ್ಳಿ ಕಳ್ಳತನ ಪ್ರಕರಣಗಳಲ್ಲಿ 152 ಆರೋಪಿಗಳ ಹೆಡೆಮುರಿ ಕಟ್ಟಿ 2,39,85,110 ಮೌಲ್ಯದ 5145.02 ಗ್ರಾಮ ಬಂಗಾರದ ಆಭರಣಗಳು ಮತ್ತು 1723 ಗ್ರಾಂ ಬೆಳ್ಳಿ ಆಭರಣಗಳು ವಶಕ್ಕೆ ಪಡೆದಿದ್ದಾರೆ. 73 ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳಲ್ಲಿ 102 ಆರೋಪಿಗಳನ್ನು ಬಂಧಿಸಿ 251 ದ್ವಿಚಕ್ರ ವಾಹನ ಸೇರಿ ಒಟ್ಟು 1.06,72,000 ಗಳ ಮೌಲ್ಯ ದ ವಾಹನ ವಶಕ್ಕೆ ಪಡೆದಿದ್ದಾರೆ. 14 ನಾಲ್ಕು ಚಕ್ರದ ವಾಹನ ಕಳ್ಳತನ ಪ್ರಕರಣಗಳಲ್ಲಿ 12 ವಿವಿಧ ಕಂಪನಿಯ ನಾಲ್ಕು ಚಕ್ರದ ವಾಹನಗಳನ್ನು ವಶಕ್ಕೆ ಪಡೆದು 19 ಜನರನ್ನು ಬಂಧಿಸಿ 1,32,41,000 ಗಳನ್ನು ವಶಕ್ಕೆ ಪಡೆದಿದ್ದಾರೆ. ಟಿಪ್ಪರ್ ಕಳ್ಳತನ ಪ್ರಕರಣಗಳಲ್ಲಿ 5 ಜನರನ್ನು ಬಂಧಿಸಿ 19,00,000 ಮೌಲ್ಯದ ಎರಡು ಟಿಪ್ಪರ್ ವಶಕ್ಕೆ ಪಡೆದಿದ್ದಾರೆ.
ಇನ್ನೂ ಪೊಲೀಸರು ನಗದು ಕಳ್ಳತನ ಪ್ರಕರಣಳನ್ನು ಬೇಧಿಸಿದ್ದು 19 ಪ್ರಕರಣಗಳಲ್ಲಿ 31 ಆರೋಪಿಗಳನ್ನು ಬಂಧಿಸಿ ಅವರಿಂದ 1,91,89,404 ನಗದು ಹಣ ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಇತರೆ 21 ಕಳ್ಳತನ ಪ್ರಕರಣಗಳನ್ನು ಭೇದಿಸಿ 36 ಜನರನ್ನು ಬಂಧಿಸಿದ್ದಾರೆ. ಹೀಗೆ 225 ಪ್ರಕರಣಗಳಲ್ಲಿ 345 ಜನರನ್ನು ಬಂಧಿಸಿ 7,02,29,764 ವಶಕ್ಕೆ ಪಡೆದು ಪ್ರಾಪರ್ಟಿ ಪರೆಡ್ ಮೂಲಕ ಉಳಿದ 3,56.21,664 ರೂ ಕಿಮ್ಮತ್ತಿನ ವಸ್ತುಗಳನ್ನು ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು ವಾರಸುದಾರರಿಗೆ ನೀಡುವ ವ್ಯವಸ್ಥೆಯನ್ನು ಮುಂದುವರೆಸಲಾಗಿದೆ ಎಂದು ಎಸ್ ಪಿ ಮಾಹಿತಿ ನೀಡಿದ್ದಾರೆ. ಇನ್ನೂ ತಮ್ಮ ಸ್ವತ್ತು ತಮಗೆ ವಾಪಸ್ ಸಿಕ್ಕಿದ್ದಕ್ಕೆ ವಾರಸುದಾರರು ಪೊಲೀಸರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.