ಇಸ್ಲಾಮಾಬಾದ್ : ಝೇಲಂ ನದಿಯ ನೀರಿನ ಮಟ್ಟ ಹಠಾತ್ತನೆ ಏರಿಕೆಯಾಗಿದ್ದು, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪ್ರವಾಹ ಎಚ್ಚರಿಕೆ ನೀಡಲಾಗಿದೆ. ಹಟ್ಟಿಯನ್ ಬಾಲಾ ಪ್ರದೇಶದಲ್ಲಿ ನೀರಿನ ತುರ್ತು ಪರಿಸ್ಥಿತಿ ಘೋಷಿಸಿದ್ದು, ಸ್ಥಳೀಯ ನಾಗರಿಕರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಎಚ್ಚರಿಕೆ ನೀಡಲಾಗಿದೆ.
ಝೇಲಂ ನದಿಯ ನೀರಿನ ಮಟ್ಟ ವೇಗವಾಗಿ ಏರಿದ್ದು, ಗರಿ ದುಪಟ್ಟಾ, ಮಝೋಯ್ ಮತ್ತು ಮುಜಫರಾಬಾದ್‌ನಂತಹ ಪ್ರದೇಶಗಳಲ್ಲಿ ಭೀತಿ ಉಂಟಾಗಿದ್ದು, ಮಸೀದಿಗಳಿಂದ ನಿರಂತರವಾಗಿ ಎಚ್ಚರಿಕೆಗಳನ್ನು ಪ್ರಸಾರ ಮಾಡಲಾಗುತ್ತಿದೆ.
ಪಾಕಿಸ್ತಾನಕ್ಕೆ ನೀರು ನಿಲ್ಲಿಸೋದು ಸುಲಭನಾ?, ಸಿಂಧೂ ತಡೆಯೋ ಸಾಮಾರ್ಥ್ಯ ಭಾರತಕ್ಕಿದೀಯಾ? – ತಜ್ಞರು ಹೇಳುವುದೇನು?
ಭಾರತವು ಯಾವುದೇ ಪೂರ್ವ ಸೂಚನೆ ಇಲ್ಲದೆ ಅನಂತನಾಗ್‌ನಿಂದ ಝೇಲಂ ನದಿಗೆ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಿದ್ದರಿಂದ, ಚಕೋತಿ ಗಡಿಯ ಮೂಲಕ ಪಿಒಕೆ ಪ್ರವೇಶಿಸಿದೆ ಎಂದು ಪಾಕಿಸ್ತಾನಿ ಅಧಿಕಾರಿಗಳು ಮತ್ತು ಸ್ಥಳೀಯರು ಆರೋಪಿಸಿದ್ದಾರೆ. ಇದು ಭಾರತ ಉದ್ದೇಶಪೂರ್ವಕವಾಗಿ ತೆಗೆದುಕೊಂಡ ಕ್ರಮ ಎಂದು ಸಹ ಪಾಕಿಸ್ತಾನ ದೂರಿದೆ.
ಸಿಂಧೂ ನದಿ ನೀರು ಒಪ್ಪಂದವನ್ನು ಸ್ಥಗಿತಗೊಳಿಸುವುದಾಗಿ ಭಾರತ ಇತ್ತೀಚೆಗೆ ಬೆದರಿಕೆ ಹಾಕಿದ್ದ ನಂತರ ಈ ಅನಿರೀಕ್ಷಿತ ನಡೆ ಅಚ್ಚರಿಯೇನಲ್ಲ ಎಂದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ. ಇದು ಎರಡೂ ದೇಶಗಳ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಬಹುದು ಎನ್ನಲಾಗಿದೆ.