ಇಸ್ಲಾಮಾಬಾದ್: ಪಾಕಿಸ್ತಾನಿ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಮತ್ತೊಮ್ಮೆ ಭಾರತದ ವಿರುದ್ಧ ಕಟುವಾದ ಹೇಳಿಕೆ ನೀಡಿದ್ದಾರೆ. ಇತ್ತೀಚೆಗೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮುನೀರ್, ಕಾಶ್ಮೀರ ವಿಷಯದ ಬಗ್ಗೆ ಭಾರತವನ್ನು ಮತ್ತೊಮ್ಮೆ ಕೆಣಕಿದರು ಮತ್ತು ಭಾರತದ ಯಾವುದೇ ಶಕ್ತಿಯು ಪಾಕಿಸ್ತಾನವನ್ನು ಪಾಕಿಸ್ತಾನದಿಂದ ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಬಲೂಚಿಸ್ತಾನದಲ್ಲಿ ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಅವರು ಪ್ರತಿಜ್ಞೆ ಮಾಡಿದರು, “ಹತ್ತು ತಲೆಮಾರುಗಳ ಭಯೋತ್ಪಾದಕರು ಸಹ ಬಲೂಚಿಸ್ತಾನ ಮತ್ತು ಪಾಕಿಸ್ತಾನಕ್ಕೆ ಹಾನಿ ಮಾಡಲು ಸಾಧ್ಯವಿಲ್ಲ” ಎಂದು ಹೇಳಿದರು.
“ಭಯೋತ್ಪಾದಕರೇ, ಅವರು ನಮ್ಮ ದೇಶದ ಭವಿಷ್ಯವನ್ನು ನಮ್ಮಿಂದ ಕಸಿದುಕೊಳ್ಳಬಹುದು ಎಂದು ನೀವು ಭಾವಿಸುತ್ತೀರಾ? ಈ ಮಹಾನ್ ಪಾಕಿಸ್ತಾನಿ ರಾಷ್ಟ್ರ ಮತ್ತು ಪಾಕಿಸ್ತಾನಿ ಸಶಸ್ತ್ರ ಪಡೆಗಳು, 1.3 ಮಿಲಿಯನ್ ಭಾರತೀಯ ಸೇನೆ, ತಮ್ಮ ಎಲ್ಲಾ ಸಾಮರ್ಥ್ಯಗಳೊಂದಿಗೆ, ನಮ್ಮನ್ನು ಬೆದರಿಸಲು ಸಾಧ್ಯವಾಗದಿದ್ದರೆ, ಈ ಭಯೋತ್ಪಾದಕರು ಪಾಕಿಸ್ತಾನದ ಸಶಸ್ತ್ರ ಪಡೆಗಳನ್ನು ನಿಗ್ರಹಿಸಬಹುದೇ?” ಎಂದು ಅವರು ಕಾರ್ಯಕ್ರಮದಲ್ಲಿ ಹೇಳಿದರು.
ಓವರ್ಸೀಸ್ ಪಾಕಿಸ್ತಾನಿ ಕನ್ವೆನ್ಷನ್ನಲ್ಲಿ ಭಾಷಣ ಮಾಡಿದ ಮುನೀರ್, ಪಾಕಿಸ್ತಾನಿಯರು ಹಿಂದೂ ಮತ್ತು ಮುಸ್ಲಿಮರ ನಡುವಿನ ವ್ಯತ್ಯಾಸಗಳನ್ನು ತಮ್ಮ ಮಕ್ಕಳಿಗೆ ಹೇಳಿಕೊಡಬೇಕು. ಈ ರಾಷ್ಟ್ರ ಹೇಗೆ ಹುಟ್ಟಿತು ಎಂಬ ಕಥೆಯನ್ನು ಹೇಳಬೇಕು. ಈ ವ್ಯತ್ಯಾಸವೇ ಪಾಕಿಸ್ತಾನ ರಚನೆಗೆ ಮೂಲ ಆಧಾರವಾಗಿದ್ದು, ಪಾಕಿಸ್ತಾನದ ಜನಕ ಮೊಹಮ್ಮದ್ ಅಲಿ ಜಿನ್ನಾ ಅವರ ದ್ವಿರಾಷ್ಟ್ರ ಸಿದ್ಧಾಂತದ ಮಹತ್ವವನ್ನು ನಾವು ಮುಂದಿನ ಪೀಳಿಗೆಗೆ ತಿಳಿಸಬೇಕು ಎಂದು ಕರೆ ಕೊಟ್ಟಿದ್ದಾರೆ.
ನಮ್ಮ ಆಲೋಚನೆ, ಸಿದ್ಧಾಂತ ಬೇರೆ
ಹಿಂದೂಗಳು ಮತ್ತು ಮುಸ್ಲಿಮರ ನಡುವೆ ದೊಡ್ಡ ವ್ಯತ್ಯಾಸವಿದೆ ಅಂತ ನಮ್ಮ ಮಕ್ಕಳಿಗೆ ತಿಳಿಸಬೇಕು. ನಮ್ಮ ಧರ್ಮ ಬೇರೆ, ನಮ್ಮ ಆಚಾರಗಳು ಬೇರೆ, ನಮ್ಮ ಸಂಪ್ರದಾಯಗಳು ಬೇರೆ, ನಮ್ಮ ಆಲೋಚನೆಗಳು ಬೇರೆ, ನಮ್ಮ ಮಹತ್ವಾಕಾಂಕ್ಷೆಗಳು ಬೇರೆ, ಅಲ್ಲಿಯೇ ಎರಡು ರಾಷ್ಟ್ರ ಸಿದ್ಧಾಂತದ ಬುನಾದಿ ಹಾಕಲಾಯಿತು. ನಾವು ಎರಡು ರಾಷ್ಟ್ರಗಳು, ನಾವು ಒಂದೇ ರಾಷ್ಟ್ರವಲ್ಲ ಎಂದು ನಮ್ಮ ಮಕ್ಕಳಿಗೆ ತಿಳಿಸಿ.
ಇಸ್ಲಾಮಿಕ್ ಗಣರಾಜ್ಯದ ಸೃಷ್ಟಿಗೆ ಇದು ಮುಖ್ಯ ಕಾರಣ ಎಂಬ ಸತ್ಯ ಅವರಿಗೆ ಗೊತ್ತಾಗಲಿ. 1947ರಲ್ಲಿ ಪಾಕಿಸ್ತಾನ ರಚನೆಗೆ ಮೊಹಮ್ಮದ್ ಅಲಿ ಜಿನ್ನಾ ಅವರ ದ್ವಿರಾಷ್ಟ್ರ ಸಿದ್ಧಾಂತವೇ ಕಾರಣ ಎಂಬುದನ್ನು ನಮ್ಮ ಭವಿಷ್ಯದ ಪೀಳಿಗೆ ಮರೆಯಬಾರದು ಎಂದು ಮುನೀರ್ ಹೇಳಿಕೆ ನೀಡಿದ್ದು, ಮತ್ತೆ ಭಾರತದ ವಿರುದ್ಧ ಕ್ಯಾತೆ ತೆಗೆಯುವ ಕೆಲಸ ಮಾಡಿದ್ದಾರೆ.