ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತರ ದೇಶಗಳ ವಿರುದ್ಧ ಸುಂಕ ಯುದ್ಧ ಘೋಷಿಸಿರುವುದರಿಂದ ಪ್ರಪಂಚದಾದ್ಯಂತದ ಷೇರು ಮಾರುಕಟ್ಟೆಗಳು ಭಾರಿ ನಷ್ಟವನ್ನು ಅನುಭವಿಸುತ್ತಿವೆ. ಶತಕೋಟಿ ಡಾಲರ್ ಸಂಪತ್ತು ಈಗಾಗಲೇ ಆವಿಯಾಗಿದೆ. ಇದರ ನಡುವೆ ಅಮೆರಿಕದ ಪ್ರತಿ ಸುಂಕದಿಂದ ಕೆರಳಿರುವ ಚೀನಾ ಶೇ. 125ರಷ್ಟು ಸುಂಕ ಏರಿಕೆ ಮಾಡಿ ದೊಡ್ಡಣ್ಣನಿಗೆ ತಿರುಗೇಟು ನೀಡಿದೆ.
ಹೌದು ಅಮೆರಿಕ ವಿಧಿಸಿದ್ದ 145% ತೆರಿಗೆಗೆ ಪ್ರತಿಯಾಗಿ ಈಗ ಚೀನಾ ಅಮೆರಿಕದಿಂದ ಆಮದಾಗುವ ವಸ್ತುಗಳ ಮೇಲೆ 125% ತೆರಿಗೆ ವಿಧಿಸುವುದಾಗಿ ಪ್ರಕಟಿಸಿದೆ. ಹೊಸ ತೆರಿಗೆ ಶನಿವಾರದಿಂದ ಜಾರಿಗೆ ಬರಲಿದೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಅಮೆರಿಕ ಆರಂಭಿಸಿದ ತೆರಿಗೆ ಸಮರದ ವಿರುದ್ಧ ಕೈ ಜೋಡಿಸುವಂತೆ ಯುರೋಪಿಯನ್ ಒಕ್ಕೂಟಕ್ಕೆ (EU) ಮನವಿ ಮಾಡಿದ ಕೆಲವೇ ಗಂಟೆಗಳಲ್ಲಿ ಚೀನಾದ ನಿರ್ಧಾರ ಪ್ರಕಟವಾಗಿದೆ.
ಚೀನಾದ ಮೇಲೆ ಅಮೆರಿಕವು ಅಸಹಜವಾಗಿ ಹೆಚ್ಚಿನ ಸುಂಕಗಳನ್ನು ವಿಧಿಸುವುದು ಅಂತರರಾಷ್ಟ್ರೀಯ ವ್ಯಾಪಾರ ನಿಯಮಗಳು, ಮೂಲಭೂತ ಆರ್ಥಿಕ ಕಾನೂನುಗಳು ಗಂಭೀರವಾಗಿ ಉಲ್ಲಂಘಿಸುತ್ತದೆ ಎಂದು ಚೀನಾ ಹಣಕಾಸು ಸಚಿವಾಲಯ ಹೇಳಿದೆ.
ಇನ್ನೂ ಅಮೆರಿಕದೊಂದಿಗಿನ ಹೆಚ್ಚುತ್ತಿರುವ ಸುಂಕ ವಿವಾದದ ಮಧ್ಯೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ತಮ್ಮ ಮೊದಲ ಹೇಳಿಕೆ ನೀಡಿದ್ದಾರೆ. ಚೀನಾ ಯಾರಿಗೂ ಹೆದರುವುದಿಲ್ಲ ಎಂದು ಅವರು ಹೇಳಿದರು. ಕಳೆದ 70 ವರ್ಷಗಳಲ್ಲಿ ಚೀನಾದ ಅಭಿವೃದ್ಧಿಯು ಕಠಿಣ ಪರಿಶ್ರಮ ಮತ್ತು ಸ್ವಾವಲಂಬನೆಯ ಫಲಿತಾಂಶವಾಗಿದೆ ಎಂದಿದ್ದಾರೆ.
ಅಧ್ಯಕ್ಷ ಟ್ರಂಪ್ ಅವರ ಸುಂಕ ನೀತಿಯಿಂದ ಉಂಟಾದ ಜಾಗತಿಕ ಆರ್ಥಿಕ ಪ್ರಕ್ಷುಬ್ಧತೆಗೆ ಅಮೆರಿಕವೇ ಪೂರ್ಣ ಜವಾಬ್ದಾರಿಯನ್ನು ಹೊರಬೇಕು ಎಂದು ಚೀನಾ ಹೇಳಿದೆ. ಸುಂಕ ಸಮರ ಆರಂಭಿಸುವ ಮೊದಲು ಚೀನಾ ಅಮೆರಿಕದ ವಸ್ತುಗಳಿಗೆ 67% ತೆರಿಗೆ ವಿಧಿಸುತ್ತಿತ್ತು. ಟ್ರಂಪ್ ಅವರು ಏ.2 ರಂದು ಚೀನಾ ವಸ್ತುಗಳಿಗೆ 34% ತೆರಿಗೆ ಹಾಕುವುದಾಗಿ ಘೋಷಣೆ ಮಾಡಿದ್ದರು. ಇದರಿಂದಾಗಿ ಮೊದಲಿದ್ದ 20% ಸೇರಿ 54% ತೆರಿಗೆ ಏರಿಕೆಯಾಗಿತ್ತು.
ಅಮೆರಿಕದ ನಿರ್ಧಾರದಿಂದ ಸಿಟ್ಟಾದ ಚೀನಾ ಮತ್ತೆ 34% ಏರಿಕೆ ಮಾಡಿತ್ತು. ಇದಕ್ಕೆ ಸಿಟ್ಟಾದ ಟ್ರಂಪ್ ತೆರಿಗೆಯನ್ನು 104% ಏರಿಕೆ ಮಾಡಿದ್ದರು. ಅಮೆರಿಕದ ನಿರ್ಧಾರದಿಂದ ಮತ್ತೆ ಸಿಟ್ಟಾದ ಚೀನಾ ಅಮೆರಿಕದ ವಸ್ತುಗಳ ಮೇಲೆ 84% ತೆರಿಗೆ ಹಾಕಿತು. ಚೀನಾ ನಿರ್ಧಾರದಿಂದ ಆಕ್ರೋಶಗೊಂಡ ಟ್ರಂಪ್ ಈಗ ಚೀನಾದ ವಸ್ತುಗಳ ಮೇಲೆ 125% ತೆರಿಗೆ ಹಾಕುವ ಮೂಲಕ ಒಟ್ಟು 145% ತೆರಿಗೆ ಏರಿಸಿದ್ದರು. ಈಗ ಚೀನಾ 125% ತೆರಿಗೆ ಹಾಕುವುದಾಗಿ ಘೋಷಿಸಿದೆ.