ಚಿಕ್ಕಮಗಳೂರು: ಭಾರತಮಾತೆ, ಸಹೋದರಿ ಸಿಂಧೂರ ಅಳಿಸಲು ಬಂದವರನ್ನು ಅಳಿಸಿದ್ದೇವೆ ಎಂದು ಮಾಜಿ ಸಚಿವ ಸಿ.ಟಿ ರವಿ ಹೇಳಿದ್ದಾರೆ. ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ಕ್ಷಿಪಣಿ ದಾಳಿ ಮಾಡುವ ಮೂಲಕ ಪಹಲ್ಗಾಮ್ನ ಉಗ್ರರ ದಾಳಿ ಪ್ರತೀಕಾರವನ್ನು ತೀರಿಸಿಕೊಂಡಿದೆ. ಈ ವಿಚಾರವಾಗಿ ಚಿಕ್ಕಮಗಳೂರಲ್ಲಿ ಮಾತನಾಡಿದ ಅವರು,
ಮೋದಿ ಕೊಟ್ಟ ಮಾತು ತಪ್ಪೋದಿಲ್ಲ ಎಂಬ ನಂಬಿಕೆ ಇತ್ತು. ಭಾರತೀಯ ಸೇನೆ ಮೇಲೂ ಅಪಾರವಾದ ನಂಬಿಕೆ ಇತ್ತು. 71ರಲ್ಲಿ ಯುದ್ಧ ಗೆದ್ವಿ, ಆದರೆ ಸಂಧಾನದಲ್ಲಿ ಸೋತಿದ್ದೆವು. ಭಾರತಮಾತೆ, ಸಹೋದರಿ ಸಿಂಧೂರ ಅಳಿಸಲು ಬಂದವರನ್ನು ಅಳಿಸಿದ್ದೇವೆ ಎಂದರು.
ಸಿಂಧೂರ ಎಂಬ ಹೆಸರಿಗೆ ಮೋದಿ, ಸೇನೆ ಬೆಲೆ ತಂದುಕೊಟ್ಟಿದ್ದಾರೆ. ಶತ್ರುಗಳನ್ನು ಪೂರ್ಣ ನಿರ್ಣಾಮ ಮಾಡಿ, ನಿಮ್ಮ ಜೊತೆ ನಾವಿದ್ದೇವೆ. ಒಂದು ಸಲ ಅವರನ್ನು ಸಂಪೂರ್ಣವಾಗಿ ಮುಗಿಸಬೇಕು ಎಂದು ತಿಳಿಸಿದರು.
ರಾಜ್ಯ ಕಾಂಗ್ರೆಸ್ ಟ್ವೀಟ್ ಡಿಲೀಟ್ ಕುರಿತು ಪ್ರತಿಕ್ರಿಯಿಸಿದ ಅವರು, ನಾಗರಿಕರ ನಡುವೆ ಶಾಂತಿ ಇರಬೇಕು. ಶತ್ರುಗಳನ್ನು ಮಟ್ಟ ಹಾಕುವುದು ಶಾಂತಿಯೇ, ಶ್ವಾಶತ ಶಾಂತಿಗೆ ಕಾರಣವಾಗುತ್ತದೆ. ರಾಜ್ಯ ಕಾಂಗ್ರೆಸ್ಸಿಗೆ ನಾನು ಕೂಡ ಟ್ವೀಟ್ ಮಾಡಿದ್ದೆ.
ರಾಜ್ಯ ಕಾಂಗ್ರೆಸ್ ಟ್ವೀಟ್ ಡಿಲೀಟ್ ಮಾಡಿರುವುದನ್ನು ನೋಡಿದ್ದೇನೆ. ಇದು ಬದಲಾಗಿರುವ ಕಾಂಗ್ರೆಸ್ ಮನಸ್ಥಿತಿ. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಯೋಗ್ಯತೆಯನ್ನು ಕಳೆದುಕೊಳ್ಳುತ್ತಿದೆ. ಕಾಂಗ್ರೆಸ್ ಮೇಲೆ ಜನರಿಗೆ ಅಪನಂಬಿಕೆ, ಜಿಗುಪ್ಸೆಯನ್ನು ಮೂಡಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.