ಹಾವೇರಿ: ನಾವು ಅಧಿಕಾರಕ್ಕೆ ಬರುವ ಮುಂಚಿತವಾಗಿ ಕೊಟ್ಟಂತಹ ಗ್ಯಾರಂಟಿ ಭರವಸೆಗಳನ್ನು ಈಡೇರಿಸಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ಹಾವೇರಿ ಜಿಲ್ಲೆಯ ಹಾನಗಲ್ ವಿಧಾನಸಭಾ ಕ್ಷೇತ್ರದ ಅಕ್ಕಿ ಆಲೂರಿನಲ್ಲಿ ಮಾತನಾಡಿದ ಅವರು, ನಾವು ಅಧಿಕಾರಕ್ಕೆ ಬರುವ ಮುಂಚಿತವಾಗಿ ಕೊಟ್ಟಂತಹ ಗ್ಯಾರಂಟಿ ಭರವಸೆಗಳನ್ನು ಈಡೇರಿಸಿದ್ದೇವೆ.
ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದ ನಿಮಗೆ ನಾವು ಆಸರೆಯಾಗಿ ನಿಂತು ಆಧಾರವಾಗಿದ್ದೇವೆ. ಕೇಂದ್ರ ಸರ್ಕಾರ ನಮ್ಮ ರಾಜ್ಯದಿಂದ ಹೋದ ತೆರಿಗೆಯಲ್ಲಿ ಕೇವಲ ಶೇ 13 ರಷ್ಟನ್ನು ಮಾತ್ರ ವಾಪಸ್ ಕೊಡುತ್ತಿದೆ. ಆದರೂ ನಾವು 4 ಲಕ್ಷ ಕೋಟಿಗೂ ಅಧಿಕವಾದ ಬಜೆಟ್ ಅನ್ನು ರಾಜ್ಯದ ಅಭಿವೃದ್ಧಿಗಾಗಿ ಮಂಡನೆ ಮಾಡಿದ್ದೇವೆ” ಎಂದರು.
ಮಗು ಆದ್ಮೇಲೆ Hair Fall ಜಾಸ್ತಿ ಆಗಿದ್ಯಾ!? ಹಾಗಿದ್ರೆ ತಪ್ಪದೇ ಆಹಾರದಲ್ಲಿ ಈ ವಸ್ತು ಸೇರಿಸಿ!
ಗ್ಯಾರಂಟಿ ವಿರೋಧ ಮಾಡುತ್ತಿದ್ದ ಬಿಜೆಪಿಯವರು ನಂತರ ಮಹಾರಾಷ್ಟ್ರ, ಹರಿಯಾಣ, ಮಧ್ಯಪ್ರದೇಶ, ದೆಹಲಿ ಚುನಾವಣೆಯಲ್ಲಿ ಅವರೂ ಗ್ಯಾರಂಟಿಗಳನ್ನು ಘೋಷಣೆ ಮಾಡಿದರು. ದೇಶದ ಪ್ರಧಾನಿ ಕರ್ನಾಟಕ ಬರಿದಾಗಿ ಹೋಯಿತು ಎಂದರು. ಗ್ಯಾರಂಟಿ ಯೋಜನೆಗಳಿಗೆ 52 ಸಾವಿರ ಕೋಟಿ ಕೊಟ್ಟು ರಾಜ್ಯದಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಅಭಿವೃದ್ಧಿ ಕೆಲಸ ಮಾಡಲಾಗುತ್ತಿದೆ. ಗ್ಯಾರಂಟಿಗಳಿಂದ ಪ್ರತಿಯೊಂದು ಕುಟುಂಬ 5-6 ಸಾವಿರ ಉಳಿತಾಯ ಮಾಡುತ್ತಿದೆ” ಎಂದರು.
“ಗುಣವಿಲ್ಲದ ರೂಪ ವ್ಯರ್ಥ. ಹಸಿವಿಲ್ಲದ ಊಟ ವ್ಯರ್ಥ. ಪರೋಪಕಾರವಿಲ್ಲದ ಅಧಿಕಾರ ವ್ಯರ್ಥ. ಸಂಸ್ಕಾರವಿಲ್ಲದ ಶಿಕ್ಷಣ ವ್ಯರ್ಥ. ಅದಕ್ಕಾಗಿ ನಮಗೆ ಸಿಕ್ಕಿರುವ ಅವಕಾಶ ವ್ಯರ್ಥವಾಗಬಾರದು ಎಂದು ನಿಮ್ಮ ಸೇವೆ ಮಾಡುತ್ತಿದ್ದೇವೆ” ಎಂದರು.
“ನಾವು ಹಾನಗಲ್ ಕ್ಷೇತ್ರಕ್ಕೆ ಕೇವಲ ಅಭಿವೃದ್ಧಿ ಕೆಲಸಗಳ ಉದ್ಘಾಟನೆಗೆ ಬಂದಿಲ್ಲ. ಬದಲಾಗಿ ನೀವು ನಮಗೆ ಕೊಟ್ಟ ಶಕ್ತಿಗೆ ಪ್ರತಿಯಾಗಿ ನಿಮ್ಮ ಋಣ ತೀರಿಸಲು ಬಂದಿದ್ದೇವೆ. ನೀವು ನಮ್ಮ ಪಕ್ಷದ ಮೇಲೆ ನಂಬಿಕೆಯಿಟ್ಟು ಆಯ್ಕೆ ಮಾಡಿದ್ದೀರಿ. ಅದಕ್ಕಾಗಿ ನಾವು ನಿಮಗೆ ಆಭಾರಿ” ಎಂದು ತಿಳಿಸಿದರು.
“ನಮ್ಮ ಗೌರವ ನಮ್ಮ ನಾಲಿಗೆ ಮೇಲೆ ಇರುತ್ತದೆ. ಮಾತು ಕೂಡ ನಮ್ಮ ಸಂಸ್ಕಾರ ಹೇಳುತ್ತದೆ. ಅಂದರೆ ನಾವು ನುಡಿದಂತೆ ನಡೆಯಬೇಕು ಎಂಬುದು ಇದರ ಅರ್ಥ. ರಾಜಕಾರಣಿಗಳಿಗೆ ಅಂತಿಮವಾಗಿ ಮತದಾರನೇ ಈಶ್ವರ. ಮತದಾರನಿಗೆ ಸೇವೆ ಮಾಡಬೇಕು ಎಂಬುದು ನಮ್ಮ ಸಂಕಲ್ಪ. ಇದಕ್ಕೆ ಬದ್ಧವಾಗಿ ಕೆಲಸ ಮಾಡಬೇಕು ಎಂದು ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಕೆಲಸ ಮಾಡುತ್ತಿದೆ. ರಾಜ್ಯದ ಉದ್ದಗಲಕ್ಕೂ ನಾವು ಇದೇ ಕೆಲಸವನ್ನು ಮಾಡುತ್ತಿದ್ದೇವೆ” ಎಂದು ನುಡಿದರು.
“ಹಾನಗಲ್ಲಿನ ಶಾಸಕರಾದ ಶ್ರೀನಿವಾಸ ಮಾನೆ ಅವರು ಅತ್ಯಂತ ಕ್ರಿಯಾಶೀಲವಾದ ಶಾಸಕರು. ನೀರಾವರಿ, ಲೋಕೋಪಯೋಗಿ ಮಾತ್ರವಲ್ಲ ಎಲ್ಲಾ ಇಲಾಖೆಗಳಿಂದ ಜನರಿಗೆ ಉಪಯೋಗವಾಗುವ ಕೆಲಸ ಮಾಡುತ್ತಿದ್ದಾರೆ. ಕಂದಾಯ, ವಿದ್ಯುತ್ ಇಲಾಖೆಯಿಂದ ರೈತರಿಗೆ ಬೇಕಾದಂತಹ ಕೆಲಸ ಮಾಡಿಕೊಡುತ್ತಿದ್ದಾರೆ. ಸಮುದಾಯದ ಬೆಂಬಲ ಇಲ್ಲದೇ ಹೋದರು ಸಹ ಕಳೆದ ಎರಡು ದಶಕಗಳಿಂದ ಜನಸೇವೆ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗಲೂ ಇವರನ್ನು ಉಪಚುನಾವಣೆಯಲ್ಲಿ ಗೆಲ್ಲಿಸಿ ನಮ್ಮ ಮೇಲೆ ನಂಬಿಕೆ ಇಟ್ಟವರು ನೀವು” ಎಂದು ಹೇಳಿದರು.
“ಹಾವೇರಿ ಜಿಲ್ಲೆ ಐತಿಹಾಸಿಕ ಭೂಮಿ. ಸಂತ ಶಿಶುನಾಳ ಶರೀಫರು, ಕನಕದಾಸರು ಸೇರಿದಂತೆ ಹಲವಾರು ಯೋಗಿಗಳು ಜನಿಸಿದ ಭೂಮಿಯಿದು. ನಿಜಲಿಂಗಪ್ಪ ಅವರಿಗೆ ರಾಜಕೀಯ ಪುರ್ನಜನ್ಮ ಕೊಟ್ಟಂತಹ ಕ್ಷೇತ್ರವಿದು. ಉಪಚುನಾವಣೆಯಲ್ಲಿ ನಮ್ಮ ಪರವಾಗಿ ನೀವು ಕೊಟ್ಟ ತೀರ್ಪು ಐತಿಹಾಸಿಕವಾದುದು” ಎಂದರು.