ಅಕ್ಷಯ ತೃತೀಯಕ್ಕೆ ವಿಶೇಷವಾದ ಮಹತ್ವವನ್ನು ನೀಡಲಾಗಿದೆ. ಈ ದಿನ ದಾನ ಧರ್ಮವನ್ನು ಮಾಡುವುದರೊಂದಿಗೆ ಕೆಲವು ವಸ್ತುಗಳನ್ನು ಖರೀದಿಸುವುದು ಬಹಳ ಶುಭ ಎಂದು ಹೇಳಲಾಗುತ್ತದೆ. ಪ್ರತಿ ವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ತಿಥಿದಂದು ಅಕ್ಷಯ ತೃತೀಯವನ್ನು ಆಚರಿಸಲಾಗುವುದು. ಈ ವರ್ಷ ಏಪ್ರಿಲ್ 30ರ ಬುಧವಾರ, ಅಕ್ಷಯ ತೃತೀಯ ಹಬ್ಬವನ್ನು ಆಚರಿಸಲಾಗುವುದು. ಈ ತಿಥಿಯ ಆರಂಭವು ಏಪ್ರಿಲ್ 29ರ ಸಂಜೆ 5.29 ಕ್ಕೆ ಆಗುವುದು. ಆದರೆ ಉದಯ ತಿಥಿಯ ಅನುಸಾರ ಅಕ್ಷಯ ತೃತೀಯವನ್ನು ಏಪ್ರಿಲ್ 30 ರಂದು ಆಚರಿಸಲಾಗುವುದು.
ಅಕ್ಷಯ ತೃತೀಯದಂದು ಚಿನ್ನ ಖರೀದಿಸುವುದೇಕೆ?
ಹಿಂದೂ ಧರ್ಮದಲ್ಲಿ ಚಿನ್ನವನ್ನು ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ. ಈ ನಂಬಿಕೆಯ ಹಿಂದೆ ಒಂದು ಪೌರಾಣಿಕ ಕಥೆಯಿದೆ, ಅದರ ಪ್ರಕಾರ, ದೇವತೆಗಳು ಮತ್ತು ರಾಕ್ಷಸರು ಒಟ್ಟಾಗಿ ಸಮುದ್ರ ಮಂಥನ ಮಾಡಿದಾಗ, ಲಕ್ಷ್ಮಿ ದೇವಿಯೊಂದಿಗೆ ಅನೇಕ ಬೆಲೆಬಾಳುವ ವಸ್ತುಗಳು ಹೊರಹೊಮ್ಮಿದವು.
ಅವುಗಳಲ್ಲಿ ಚಿನ್ನವೂ ಒಂದು. ವಿಷ್ಣು ಈ ಚಿನ್ನವನ್ನು ಧರಿಸಿದ್ದನು. ಈ ಕಾರಣಕ್ಕಾಗಿ, ಇದನ್ನು ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಯಿತು. ಅದಕ್ಕಾಗಿಯೇ ಅಕ್ಷಯ ತೃತೀಯದಂದು ಚಿನ್ನ ಖರೀದಿಸುವ ಸಂಪ್ರದಾಯವಿದೆ.
ಹಿಂದೂಗಳು ಅಕ್ಷಯ ತೃತೀಯದಂದು ಚಿನ್ನ ಅಥವಾ ಚಿನ್ನದ ಆಭರಣಗಳನ್ನು ಖರೀದಿಸಿ ಮನೆಗೆ ತಂದಾಗ, ಲಕ್ಷ್ಮಿ ದೇವಿಯೂ ಅದರೊಂದಿಗೆ ಮನೆಗೆ ಬರುತ್ತಾಳೆ ಎಂದು ನಂಬುತ್ತಾರೆ. ಅಕ್ಷಯ ತೃತೀಯದಂದು ನಾವು ಖರೀದಿಸುವ ಸಂಪತ್ತು ಅಥವಾ ಆಸ್ತಿ ನಮ್ಮೊಂದಿಗೆ ಶಾಶ್ವತವಾಗಿ ಉಳಿಯುತ್ತದೆ ಮತ್ತು ಸಂತೋಷವನ್ನು ತರುತ್ತದೆ ಎಂದು ನಂಬಲಾಗಿದೆ. ಅದಕ್ಕಾಗಿಯೇ ಜನರು ಅಕ್ಷಯ ತೃತೀಯದಂದು ಚಿನ್ನವನ್ನು ಖರೀದಿಸುತ್ತಾರೆ.
ಒಟ್ಟಾರೆಯಾಗಿ ಅಕ್ಷಯ ತೃತೀಯ ಒಂದು ಮಂಗಳಕರ ದಿನ. ಹಿಂದೂ ಸಂಪ್ರದಾಯದ ಪ್ರಕಾರ, ಈ ದಿನದ 24 ಗಂಟೆಗಳ ಪ್ರತಿ ಕ್ಷಣವೂ ಪ್ರತಿಯೊಂದು ಕೆಲಸಕ್ಕೂ ಒಳ್ಳೆಯದು. ಆದ್ದರಿಂದ, ಚಿನ್ನದ ನಾಣ್ಯಗಳನ್ನು ಖರೀದಿಸುವುದು ಅಥವಾ ಒಂದು ಸಣ್ಣ ಚಿನ್ನವನ್ನು ಖರೀದಿಸುವುದು ಒಳ್ಳೆಯ ಸಮಯವನ್ನು ತರುತ್ತದೆ.