ರಾಕಿಂಗ್ ಸ್ಟಾರ್ ಯಶ್ ನ್ಯಾಷನಲ್ ಸ್ಟಾರ್ ಆಗಿ ಬೆಳೆದ ಪರಿ ಗೊತ್ತೇ ಇದೆ. ಹಾರ್ಡ್ ವರ್ಕ್ ಯಶ್ ಯಶಸ್ಸಿನ ಸೀಕ್ರೆಟ್. ಒಬ್ಬ ಬಸ್ ಕಂಡೆಂಟರ್ ಮಗ ಇವತ್ತು ಹಾಲಿವುಡ್ ಸಿನಿಮಾ ಮಂದಿ ಸೈ ಸೈ ಎನಿಸಿಕೊಳ್ಳುವುದು ಅಂದ್ರೆ ಸಾಮಾನ್ಯದ ಸಂಗತಿ ಅಲ್ಲವೇ ಅಲ್ಲ ಬಿಡಿ. ಸದಾ ಸಿನಿಮಾ ತಪಸ್ಸು ಮಾಡುವ ಯಶ್ ಕೆಜಿಎಫ್ ಮೂಲಕ ಇಂಡಿಯನ್ ಸಿನಿ ಇಂಡಸ್ಟ್ರೀಯನ್ನು ಕನ್ನಡದತ್ತ ಚಪ್ಪಾಳೆ ತಟ್ಟುತ್ತಾ ತಿರುಗಿ ನೋಡುವಂತೆ ಮಾಡಿದ್ದಾರೆ. ಸದ್ಯ ಟಾಕ್ಸಿಕ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಹಾಲಿವುಡ್ ಟಚ್ ಕೊಡುವ ಹೊಸ ಪ್ರಯತ್ನಕ್ಕೆ ಅಣ್ತಮ್ಮಾ ಕೈ ಹಾಕಿದ್ದಾರೆ. ಬಾಲಿವುಡ್ ಗೆ ನಾನ್ ಹೋಗಲ್ಲ. ಅವರನ್ನೇ ಇಲ್ಲಿಗೆ ಕರೆಸಿಕೊಳ್ಳುತ್ತೇನೆಂದು ಶಪಥ ಮಾಡಿದ್ದ ಯಶ್ ಹೇಳಿದ ಮಾತಿನಂತೆ ಕೆಲಸ ಮಾಡುತ್ತಿದ್ದಾರೆ. ಯಶ್ ಅನ್ನೋ ಹೆಸ್ರು ಇವತ್ತು ಬ್ರ್ಯಾಂಡ್ ಆಗಲು ಅವರ ಹಾರ್ಡ್ ವರ್ಕ್ ಕಾರಣ. ಇಂತಹ ಯಶ್ ಅವರನ್ನು ಕಳೆಗೆ ಬೀಳುವುದನ್ನು ಆ ಒಂದು ಗ್ಯಾಂಗ್ ಕಾಯ್ತಿದೆ ಅಂದ್ರೆ ಇದು ನಿಜಕ್ಕೂ ವಿಪರ್ಯಾಸವೇ ಸರಿ.
ಕನ್ನಡ ಚಿತ್ರರಂಗ ಬೆಳಿಬೇಕು. ಎಲ್ಲರೂ ನಮ್ಮತ್ತ ತಿರುಗಿ ನೋಡಬೇಕು ಅನ್ನೋ ಯಶ್ ಮಹಾದಾಸೆ. ಅದಕ್ಕಾಗಿಯೇ ಅವರು ಶ್ರಮಿಸುತ್ತಿದ್ದಾರೆ. ಆದರೆ ಯಶ್ ಏಳಿಗೆ ಕೆಲವರ ಕಣ್ಣು ಕುಕ್ಕಿತಿದೆ. ಈ ಶಾಕಿಂಗ್ ವಿಚಾರವನ್ನು ನಟಿ ಮಾನ್ವಿತಾ ಹರೀಶ್ ಬಿಚ್ಚಿಟ್ಟಿದ್ದಾರೆ. ಖಾಸಗಿ ಚಾನೆಲ್ ಸಂದರ್ಶನವೊಂದರಲ್ಲಿ ಮಾನ್ವಿತಾ, ಕನ್ನಡ ಚಿತ್ರರಂಗದಲ್ಲಿರುವ ಕೀಳು ಮನಸ್ಥಿತಿ ಬಗ್ಗೆ ಕೆಂಡವಾಗಿದ್ದಾರೆ. ಒಂದು ದಿನ ನಾವೆಲ್ಲ ಒಂದು ಮೀಟಿಂಗ್ನಲ್ಲಿ ಕುಳಿತಿಕೊಂಡಿದ್ವಿ, ಒಂದೇ ಸಿನಿಮಾ ಮಾಡುವ ಒಬ್ಬ ನಿರ್ಮಾಪಕ, ನನಗೂ ಸ್ನೇಹಿತರೇ ಅವರು ಎಂದಿರುವ ಮಾನ್ವಿತಾ ಹೀಗೆ ಮಾತನಾಡುವಾಗ ಯಶ್ ವಿಚಾರ ಬಂತು ಅವರು ಕೂಡಲೇ ಏ ಅವರು ನಂಗೆ ತುಂಬಾ ಹಿಂದೆಯಿಂದಲೂ ಗೊತ್ತು ಅನ್ನೋ ರೀತಿ ಮಾತನಾಡಿದರು ಎಂದು ಹೇಳಿದ್ದಾರೆ. ಮುಂದುವರೆದು, ಒಳ್ಳೆಯದಾಯ್ತು ಅಂದುಕೊಂಡು ನಾನು ಸುಮ್ಮನಾದೆ, ಆದರೆ ಅವರು ಹಾಗೇ ಮಾತನಾಡುತ್ತಲೇ ಹೋದರು, ಅವರೆಲ್ಲ ಹೇಗೆ ಮಾತನಾಡುತ್ತಿದ್ದರು ಅಂದರೆ ಅವರೆಲ್ಲ ಯಶ್ ಕೆಳಗೆ ಬೀಳುವುದನ್ನ ನೋಡಲು ಕಾಯುತ್ತಿರುವಂತೆ ಇತ್ತು ಎಂದು ಮಾನ್ವಿತಾ ಹೇಳಿದ್ದಾರೆ.
ಟಾಕ್ಸಿಕ್ನಂತಹ ಚಿತ್ರವನ್ನು ಯಶ್ ಮಾಡುತ್ತಿದ್ದಾರೆ, ಆ ಚಿತ್ರ ಗೆಲ್ಲಬೇಕು, ಅದರಿಂದ ಇನ್ನು ಒಂದಿಷ್ಟು ಜನರಿಗೆ ಕೆಲಸ ಸಿಗುತ್ತೆ, ಆ ವ್ಯಕ್ತಿ ಏನೋ ಗುರಿ ಇಟ್ಕೊಂಡು ಹೋಗ್ತಿದ್ದಾರೆ ಅವರಿಗೆ ಒಳ್ಳೆಯದಾದರೆ ಕನ್ನಡ ಚಿತ್ರರಂಗಕ್ಕೆ ಒಳ್ಳೆಯದಾಗುತ್ತೆ ಎನ್ನುವ ಮನಸ್ಥಿತಿಯೇ ಅವರಲ್ಲಿ ಇರಲಿಲ್ಲ ಎಂದಿರುವ ಮಾನ್ವಿತಾ ಅವರ ಮಾತುಗಳನ್ನು ಕೇಳಿ ನನಗೆ ಸಹಿಸಿಕೊಳ್ಳೋಕೆ ಆಗಲಿಲ್ಲ ಎಂದು ಹೇಳಿದ್ದಾರೆ. 20 ಜನ ಒಬ್ಬರ ಬಗ್ಗೆ ಕೆಟ್ಟದಾಗಿ ಮಾತನಾಡುವಾಗ, ಆ ಗುಂಪಿಗೆ ಸೇರಿಕೊಂಡು ಕೆಟ್ಟದಾಗಿ ಮಾತನಾಡುವ ವ್ಯಕ್ತಿ ನಾನಲ್ಲ ಎಂದಿದ್ದಾರೆ. ರಾಕಿಭಾಯ್ ಏಳಿಗೆ ಕಂಡು ಹೊಟ್ಟೆ ಉರಿದುಕೊಂಡ ಗ್ಯಾಂಗ್ ವಿರುದ್ಧ ಯಶ್ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಗರಂ ಆಗಿದ್ದಾರೆ. ಕೆಂಡ ಸಂಪಿಗೆ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಸಿನಿಮಾಪ್ರೇಮಿಗಳಿಗೆ ಪರಿಚಯವಾದವರು ಮಾನ್ವಿತಾ. ಟಗರು, ಕನಕ, ಚೌಕ ಸೇರಿದಂತೆ ಹಲವು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.