ರಾಕಿಂಗ್ ಸ್ಟಾರ್ ಯಶ್ ಮತ್ತೊಂದು ಮಹಾಯಾಗಕ್ಕೆ ಸಿದ್ದರಾಗಿದ್ದಾರೆ. ಹಿಂದುಗಳ ಪವಿತ್ರಗ್ರಂಥ ರಾಮಾಯಣವನ್ನು ದೃಶ್ಯರೂಪಕ್ಕಿಳಿಸಲು ನಿರ್ದೇಶಕ ನಿತಿಶ್ ತಿವಾರಿ ಜೊತೆ ಕೈ ಜೋಡಿಸಿದ್ದಾರೆ. ನಾಳೆಯಿಂದ ರಾಮಾಯಣ ಸಿನಿಮಾದ ಮೊದಲ ಭಾಗದ ಚಿತ್ರೀಕರಣಕ್ಕೆ ಕಿಕ್ ಸ್ಟಾರ್ಟ್ ಸಿಗಲಿದೆ. ಅದಕ್ಕೂ ಮುನ್ನ ಯಶ್ ಇಂದು ಬೆಳಂ ಬೆಳಗ್ಗೆ ಉಜ್ಜನಿಯ ಮಹಾಕಾಳೇಶ್ವರ ಸನ್ನಿಧಿಯಲ್ಲಿ ಪ್ರತ್ಯಕ್ಷರಾಗಿದ್ದಾರೆ. ಮಹಾಕೇಶ್ವರನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಭಸ್ಮಾರತಿಯಲ್ಲಿ ಭಾಗಿಯಾಗಿದ್ದಾರೆ.
ಶಂಕರ, ಭೋಲೆನಾಥ್, ಭಸ್ಮಾಸುರ, ನೀಲಕಂಠ, ಪರಮೇಶ್ವರ ಹೀಗೆ ನಾನಾ ಹೆಸರುಗಳಿಂದ ಕರೆಯಲ್ಪಡುವ ಮಹಾದೇವ ಶಿವನ 12 ಜ್ಯೋತಿರ್ಲಿಂಗಗಳಲ್ಲಿ ಮೂರನೇಯ ಜ್ಯೋತಿರ್ಲಿಂಗವು ಮಧ್ಯಪ್ರದೇಶದ ಉಜ್ಜಯನಿ ನಗರದಲ್ಲಿದೆ. ಸಾಮಾನ್ಯವಾಗಿ ಲಿಂಗಗಳಾಗಿರಬಹುದು ಅಥವಾ ದೇವಾಲಯಗಳಾಗಿರಬಹುದು ಭೂಮಿಯ ಮೇಲ್ಮೈಗಿಂತ ಎತ್ತರದಲ್ಲಿರುತ್ತದೆ. ಆದರೆ ಮಹಾಕಾಳೇಶ್ವರ ದೇವಾಲಯದ ಜ್ಯೋತಿರ್ಲಿಂಗವು ಭೂಮಿಯ ಮೇಲ್ಮೈಗಿಂತ ಕೆಳಗಿದ್ದು, ದಕ್ಷಿಣ ದಿಕ್ಕಿನಲ್ಲಿದೆ.
ಏನಿದು ಭಸ್ಮಾರತಿ?
ಮಹಾಕಾಳೇಶ್ವರ ದೇಗುಲದ ಭಸ್ಮ ಆರತಿಯು ಜಗತ್ಪ್ರಸಿದ್ಧವಾಗಿದೆ. ಈ ಆರತಿಯಲ್ಲಿ ಭಾಗವಹಿಸುವವರ ಎಲ್ಲಾ ರೀತಿಯ ತೊಂದರೆಗಳಿಂದ ದೂರವಾಗುತ್ತವೆ ಎಂಬ ಪ್ರತೀತಿ ಇದೆ. ಭಸ್ಮಾರತಿ ವಿಶೇಷವೆಂದರೆ ಸ್ಮಶಾನದಲ್ಲಿ ಶವಗಳನ್ನು ಸುಟ್ಟಾಗ ಸಿಗುವ ಚಿತೆಯ ಭಸ್ಮದಿಂದ ಈ ಆರತಿಯನ್ನು ಮಾಡಲಾಗುತ್ತದೆ. ಭಗವಾನ್ ಶಿವನು ಸ್ಮಶಾನದ ಸಾಧಕನಾಗಿದ್ದಾನೆ ಮತ್ತು ಆದ್ದರಿಂದ ಬೂದಿಯನ್ನು ಅವನ ಅಲಂಕಾರ ಮತ್ತು ಆಭರಣವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಪ್ರತಿದಿನ ಬೆಳಿಗ್ಗೆ ಮಹಾಕಾಲ್ ಸಮಯದಲ್ಲಿ, ಮೊದಲ ಆರತಿಯನ್ನು ಭಸ್ಮದಿಂದ ಮಾತ್ರ ಮಾಡಲಾಗುತ್ತದೆ.
ಈಗ ಕಾಲ ಬದಲಾಗಿದ್ದು, ಹಸುವಿನ ಸಗಣಿಯಿಂದ ತಯಾರಿಸಿದ ಬೆರಣಿ, ಶಮಿ, ಅರಳಿ, ಮುತ್ತುಗ , ಆಲದ ಮರ, ನೆಲ್ಲಿಕಾಯಿ, ಬಾರೆ ಕೊಂಬೆಗಳನ್ನು ಸುಟ್ಟು, ಬಟದಟೆಯಿಂದ ಶೋಧಿಸಿ ಬೂದಿ ಸಿದ್ಧಪಡಿಸಿಕೊಳ್ಳಲಾಗುತ್ತದೆ. ಈ ವಿಧಾನವನ್ನು ಅನುಸರಿಸಿ, ಪಡೆದ ಬೂದಿ ಅಥವಾ ಭಸ್ಮವನ್ನು ಮಹಾಕಾಳೇಶ್ವರನಿಗೆ ಆರತಿ ಮಾಡಲಾಗುತ್ತದೆ. ಮಹಾಕಾಳೇಶ್ವರ ಜ್ಯೋತಿರ್ಲಿಂಗವು ವಿಧಿ, ದುರದೃಷ್ಟ ಮತ್ತು ಸಾವಿನ ಭಯವನ್ನು ದೂರ ಮಾಡುತ್ತದೆ. ಭಸ್ಮವು ಪ್ರಪಂಚದ ನಿಜವಾದ ರೂಪವಾಗಿದೆ. ಒಂದು ದಿನ ಈ ಇಡೀ ಜಗತ್ತು ಈ ಬೂದಿ ಅಥವಾ ಭಸ್ಮದಲ್ಲಿ ಪರಿವರ್ತನೆಯಾಗುತ್ತದೆ. ಪ್ರಪಂಚದ ಈ ನೈಜ ರೂಪವನ್ನು ಶಿವನು ತನ್ನ ಚರ್ಮದ ಮೇಲೆ ಯಾವಾಗಲೂ ಬಳಿದುಕೊಂಡಿರುತ್ತಾನೆ. ಅಂದರೆ ಮುಂದೊಂದು ದಿನ ಈ ಜಗತ್ತು ಶಿವನಲ್ಲಿಯೇ ಲೀನವಾಗುತ್ತದೆ.
ಪ್ರತಿದಿನ ಬೆಳಗ್ಗೆ 4 ಗಂಟೆಗೆ ಆರತಿಯನ್ನು ಆಚರಿಸಲಾಗುವ ಏಕೈಕ ಜ್ಯೋತಿರ್ಲಿಂಗ ಮಹಾಕಾಳೇಶ್ವರ. ಇಲ್ಲಿನ ಶಿವಲಿಂಗಕ್ಕೆ ಹಸುವಿನ ಸಗಣಿಯಿಂದ ತಯಾರಿಸಿದ ಬೆರಣಿಯನ್ನು ಸುಟ್ಟು ಅದರ ಭಸ್ಮವನ್ನು ಆರತಿ ಬೆಳಗುವ ಸಮಯದಲ್ಲಿ ಶಿವನಿಗೆ ಅರ್ಪಿಸಲಾಗುತ್ತದೆ. ಇದನ್ನು ಭಸ್ಮಾರತಿಯೆಂದು ಕರೆಯಲಾಗುತ್ತದೆ. ಇಲ್ಲಿನ ಶಿವಲಿಂಗಕ್ಕೆ ಭಸ್ಮಾರತಿ ಮಾತ್ರವಲ್ಲದೇ, ನೈವೇದ್ಯ ಆರತಿ, ಅಭ್ಯಂಗ ಶೃಂಗಾರ, ಸಂಜೆ ಆರತಿ, ರಾತ್ರಿ ಆರತಿಯನ್ನು ಕೂಡ ಮಾಡಲಾಗುತ್ತದೆ. ರಾತ್ರಿ ಆರತಿ ಮಾಡಿದ ನಂತರ ದೇವಾಲಯದ ಬಾಗಿಲನ್ನು ಮುಚ್ಚಲಾಗುತ್ತದೆ.
ದೇಗುಲದ ಹಿನ್ನೆಲೆ?
ಉಜ್ಜಯಿನಿಯ ಮಹಾಕಾಳೇಶ್ವರನ ಬಗ್ಗೆ ರಾಮಾಯಣ, ಮಹಾಭಾರತ ಹಾಗೂ ವಿವಿಧ ವೇದ, ಪುರಾಣಗಳಲ್ಲಿ ಉಲ್ಲೇಖವಿದೆ. ಪುರಾಣಗಳ ಪ್ರಕಾರ, ಉಜ್ಜಯಿನಿಯಲ್ಲಿ ಮಹಾಕಾಲ ಕಾಣಿಸಿಕೊಂಡ ಬಗ್ಗೆ ಒಂದು ಕಥೆಯಿದೆ. ಇಡೀ ಪ್ರಾಂತ್ಯದ ಜನರನ್ನು ತುಂಬಾ ಅತೃಪ್ತಿಗೊಳಿಸಿದ್ದ ದೂಷಣನೆಂಬ ರಾಕ್ಷಸನಿದ್ದನು. ಆಗ ಶಿವನು ಪ್ರತ್ಯಕ್ಷನಾಗಿ ದೂಷಣನನ್ನು ಕೊಂದನು. ಇದಾದ ನಂತರ, ಭಕ್ತರು ಉಜ್ಜಯಿನಿಯಲ್ಲಿ ನೆಲೆಸುವಂತೆ ಶಿವನನ್ನು ಪ್ರಾರ್ಥಿಸಿದಾಗ, ಶಿವನು ಮಹಾಕಾಲ್ ಜ್ಯೋತಿರ್ಲಿಂಗದ ರೂಪದಲ್ಲಿ ಕಾಣಿಸಿಕೊಂಡನು. ಅಂದಿನಿಂದ ಶಿವನೇ ಈ ನಗರವನ್ನು ರಕ್ಷಿಸುತ್ತಿದ್ದಾನೆ ಎಂಬ ನಂಬಿಕೆ ಇದೆ.