ನಾಪೋಕ್ಲು: ಕೊಡಗು ಜಿಲ್ಲೆ ನಾಪೋಕ್ಲು ಸಮೀಪದ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಕೇರಿ,ನರಿಯಂದಡ ಗ್ರಾಮದಲ್ಲಿ ಕಳೆದ ಕೆಲವು ದಿನಗಳಿಂದ ಕಾಡಾನೆಗಳ ಹಿಂಡು ಗ್ರಾಮದ ಬೆಳಗಾರರ ತೋಟಗಳಿಗೆ ಲಗ್ಗೆ ಇಟ್ಟು ದಾಂದಲೆ ನಡೆಸಿ ಕೃಷಿ ಗಿಡಗಳನ್ನು ನಾಶಪಡಿಸಿ ಅಪಾರ ನಷ್ಟ ಉಂಟು ಮಾಡಿದ್ದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ.
ಮೆಟ್ರೋ ಪ್ರಯಾಣಿಕರು ನೋಡಲೇಬೇಕಾದ ಸ್ಟೋರಿ: ನಾಳೆ ಈ ಮಾರ್ಗದ ರೈಲು ಸಂಚಾರದಲ್ಲಿ ವ್ಯತ್ಯಯ!
ಈ ವ್ಯಾಪ್ತಿಯ ಗ್ರಾಮದಲ್ಲಿರುವ ಬೆಳೆಗಾರರ ಕಾಫಿ ತೋಟಗಳೇ ಕಾಡಾನೆಗಳ ವಾಸ ಸ್ಥಳವಾಗಿ ಮಾರ್ಪಟ್ಟಿದೆ.
ಕೋಕೇರಿ ಗ್ರಾಮದ ನೆಲ್ಲಮಕ್ಕಡ ವಿವೇಕ್ ಹಾಗೂ ಬೆಳಿಯಂಡ್ರ ಲಕ್ಕಿ ಎಂಬುವವರ ತೋಟಗಳಿಗೆ ಲಗ್ಗೆ ಇಟ್ಟ ಕಾಡಾನೆಗಳ ಹಿಂಡು ತೋಟದಲ್ಲಿ ಬೆಳೆದ ಕಾಫಿ,ಅಡಿಕೆ,ಕಾಳು ಮೆಣಸು,ಬಾಳೆ ಇನ್ನಿತರ ಫಸಲು ಭರಿತ ಕೃಷಿ ಗಿಡಗಳನ್ನು ತುಳಿದು ಅಪಾರ ನಷ್ಟ ಉಂಟು ಮಾಡಿದೆ. ಅದರಂತೆ ನರಿಯಂದಡ ಗ್ರಾಮದ ಸುಮಂತ್ ಎಂಬುವವರ ತೋಟದಲ್ಲಿ ಕಾಡಾನೆಗಳ ಹಿಂಡು ಸಂಚರಿಸುವ ದೃಶ್ಯ ಮೊಬೈಲ್ ನಲ್ಲಿ ಸೆರಿಯಾಗಿದ್ದು ಜನರಲ್ಲಿ ಆತಂಕ ಸೃಷ್ಟಿಯಾಗಿದೆ.
ಬೆಳಿಯಂಡ್ರ ಲಕ್ಕಿ ಯವರ ಮನೆಯ ಸಮೀಪಕ್ಕೆ ಮದ್ಯ ರಾತ್ರಿ ಒಂಟಿ ಸಲಗವೊಂದು ಪ್ರತ್ಯಕ್ಷವಾಗಿರುವ ದೃಶ್ಯ ಕೂಡ ಮೊಬೈಲ್ ನಲ್ಲಿ ಸರಿಯಾಗಿದೆ. ಕಾಡಾನೆಗಳ ಹಾವಳಿಯಿಂದ ಕಾರ್ಮಿಕರು ತೋಟದ ಕೆಲಸಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದು ಗ್ರಾಮದಲ್ಲಿ ಜನರು ನಡೆದಾಡಲು ಭಯಪಡುವ ಪರಿಸ್ಥಿತಿ ಉದ್ಭವವಾಗಿದೆ. ಇನ್ನಾದರೂ ಸಂಬಂಧಪಟ್ಟ ಅರಣ್ಯ ಇಲಾಖೆ ಹಾಗೂ ಸರಕಾರ ನಷ್ಟ ಸಂಭವಿಸಿದ ಬೆಳೆಗಾರರಿಗೆ ಸೂಕ್ತ ಪರಿಹಾರ ಒದಗಿಸಬೇಕು.ಅದರಂತೆ ಗ್ರಾಮದಲ್ಲಿ ಧಾಂದಲೆ ನಡೆಸುತ್ತಿರುವ ಕಾಡಾನೆಗಳನ್ನು ಕಾಡಿಗಟ್ಟುವ ಅಥವಾ ಸೆರೆ ಹಿಡಿದು ಬೇರೆಡೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.