ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ ಭರ್ಜರಿಯಾಗಿ ಗೆದ್ದು ಬೀಗಿದೆ.
ಈ ಗೆಲುವಿನ ಬಳಿಕ ಕೊಹ್ಲಿಯ ಸೆಲೆಬ್ರೇಷನ್ ವರ್ತನೆ ಕೊಂಚ ಮಿತಿ ಮೀರಿದೆ ಎನ್ನಲಾಗಿದೆ. ಮೊದಲಿಗೆ ವಿರಾಟ್ ಕೊಹ್ಲಿ ಹಾಗೂ ಪಂಜಾಬ್ ಕಿಂಗ್ಸ್ ಸ್ಪಿನ್ನರ್ ಹರ್ಪ್ರೀತ್ ಬ್ರಾರ್ ಮಾತಿನ ಚಕಮಕಿ ನಡೆಸಿದರೆ, ಆ ಬಳಿಕ ಶ್ರೇಯಸ್ ಅಯ್ಯರ್ ಹಾಗೂ ಕಿಂಗ್ ಕೊಹ್ಲಿ ಕಿತ್ತಾಡಿಕೊಂಡಿದ್ದರು.
ಅದರಲ್ಲೂ ಹರ್ಪ್ರೀತ್ ಬ್ರಾರ್ ನಡುವಣ ಮಾತಿನ ಚಕಮಕಿ ನಡುವೆ ವಿರಾಟ್ ಕೊಹ್ಲಿ, ಎಲ್ಲೆ ಮೀರಿದ್ರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಏಕೆಂದರೆ ಮಾತಿನ ನಡುವೆ ಕಿಂಗ್ ಕೊಹ್ಲಿ ನಾನು 20 ವರ್ಷದಿಂದ ಇಲ್ಲಿದ್ದೀನಿ. ನಿನ್ನ ಕೋಚ್ ಕೂಡ ನನಗೆ ಗೊತ್ತಿದೆ ಎಂದು ಹೇಳುತ್ತಿರುವುದು ಸ್ಟಂಪ್ ಮೈಕ್ನಲ್ಲಿ ಸೆರೆಯಾಗಿದೆ. ಇದಾಗ್ಯೂ ವಿರಾಟ್ ಕೊಹ್ಲಿ ಯುವ ಸ್ಪಿನ್ನರ್ನನ್ನು ಟಾರ್ಗೆಟ್ ಮಾಡಿದ್ಯಾಕೆ ಎಂಬುದು ಮಾತ್ರ ಬಹಿರಂಗವಾಗಿಲ್ಲ.
ವಿಶೇಷ ಎಂದರೆ ಇದೇ ಹರ್ಪ್ರೀತ್ ಬ್ರಾರ್ ಕಳೆದ ಸೀಸನ್ನಲ್ಲಿ ವಿರಾಟ್ ಕೊಹ್ಲಿಯನ್ನು ತಮ್ಮ ಕುಟುಂಬಸ್ಥರಿಗೆ ಪರಿಚಯಿಸಿ ಫೋಟೋ ತೆಗೆಸಿಕೊಂಡಿದ್ದರು. ಆದರೆ ಈ ಬಾರಿಯ ಸೀಸನ್ನಲ್ಲಿ ಕೊಹ್ಲಿ ಹಾಗೂ ಬ್ರಾರ್ ನಡುವೆ ವಾಗ್ಯುದ್ಧ ನಡೆದಿರುವುದೇ ಅಚ್ಚರಿಯಾಗಿದೆ.