ಎಕ್ಕ ಮಾರ್ ಮಾರ್ ಅಂತಾ ಬರೋಬ್ಬರಿ ಕುಣಿದು ದೊಡ್ಮನೆ ಅಭಿಮಾನಿಗಳಲ್ಲಿ ಕಿಕ್ ಏರಿಸಿದ್ದ ಯುವರಾಜ್ ಕುಮಾರ್ ಈಗ ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಪ್ರತ್ಯಕ್ಷರಾಗಿದ್ದಾರೆ. ಯುವ ಎರಡನೇ ಹೆಜ್ಜೆ ಎಕ್ಕ ಶೂಟಿಂಗ್ ಸದ್ಯ ವಾರಾಣಾಸಿಯಲ್ಲಿ ನಡೆಯುತ್ತಿದೆ. ಹೀಗಾಗಿ ಇಡೀ ತಂಡ ಅಲ್ಲಿಯೇ ಬೀಡುಬಿಟ್ಟಿದೆ. ಶೂಟಿಂಗ್ ಬ್ರೇಕ್ ನಡುವೆ ಚಿತ್ರದ ನಾಯಕ ಯುವರಾಜ್ ಕುಮಾರ್, ನಾಯಕಿ ಸಂಪದಾ, ನಿರ್ಮಾಪಕ ಯೋಗಿ ಜಿ ರಾಜ್ ಹಾಗೂ ಪಿಆರ್ ಕೆಯ ಸತೀಶ್ ಸೇರಿದಂತೆ ಚಿತ್ರತಂಡದ ಹಲವರು ಕಾಶಿ ವಿಶ್ವನಾಥನ ದರ್ಶನ ಪಡೆದಿದ್ದಾರೆ.
ಎಕ್ಕ ಚಿತ್ರದ 80 ರಿಂದ 85ರಷ್ಟು ಚಿತ್ರೀಕರಣ ಮುಕ್ತಾಯವಾಗಿದ್ದು, ಬಾಕಿ ಉಳಿದ 15ರಷ್ಟು ಶೂಟಿಂಗ್ ವಾರಾಣಾಸಿಯಲ್ಲಿ ನಡೆಯುತ್ತಿದೆ. ವಾರಾಣಾಸಿಯಲ್ಲಿ ಬಾಕಿ ಉಳಿದಿರುವ ಆಕ್ಷನ್ ಸೀಕ್ವೆನ್ಸ್ ಹಾಗೂ ಸಾಂಗ್ ಚಿತ್ರೀಕರಣವನ್ನು ಚಿತ್ರತಂಡ ನಡೆಸುತ್ತಿದೆ. ಏಪ್ರಿಲ್ ತಿಂಗಳಾತ್ಯಂತಕ್ಕೆ ಶೂಟಿಂಗ್ ಕಂಪ್ಲೀಟ್ ಮಾಡಿ ಚಿತ್ರತಂಡ ನಂತರ ಪ್ರಚಾರದ ಕಹಳೆ ಮೊಳಗಿಸಲು ಯೋಜನೆ ಹಾಕಿಕೊಂಡಿದೆ. ಇಡೀ ಚಿತ್ರತಂಡ ಹಾಗೂ ಪಿಆರ್ಕೆ ಪ್ರೊಡಕ್ಷನ್ಸ್, ಕೆಆರ್ಜಿ ಸ್ಟುಡಿಯೋಸ್ ಹಾಗೂ ಜಯಣ್ಣ ಫಿಲ್ಮ್ಸ್ ಒಟ್ಟುಗೂಡಿ ವೇಗವಾಗಿ ಕೆಲಸ ಮಾಡುತ್ತಿರುವುದು ಗೊತ್ತಾಗುತ್ತಿದೆ.
ಎಕ್ಕ ಯುವ ರಾಜ್ಕುಮಾರ್ ನಟನೆಯ 2ನೇ ಸಿನಿಮಾ. ರೋಹಿತ್ ಪದಕಿ ಸಾರಥ್ಯದಲ್ಲಿ ಚಿತ್ರ ಮೂಡಿ ಬರುತ್ತಿದ್ದು, ಚಿತ್ರದಲ್ಲಿ ಅತುಲ್ ಕುಲಕರ್ಣಿ, ಡೆಡ್ಲಿ ಆದಿತ್ಯಾ ಸೇರಿದಂತೆ ದೊಡ್ಡ ತಾರಗಣ ಚಿತ್ರದಲ್ಲಿ. ಸಂಜನಾ ಆನಂದ್, ಸಂಪದಾ ನಾಯಕಿಯಾಗಿ ಸಾಥ್ ಕೊಡುತ್ತಿದ್ದಾರೆ. ರೋಹಿತ್ ಪದಕಿ, ವಿಕ್ರಂ ಹತ್ವಾರ್ ಜೊತೆಗೆ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಚರಣ್ ರಾಜ್ ಸಂಗೀತ, ಸತ್ಯ ಹೆಗಡೆ ಛಾಯಾಗ್ರಹಣ ಮತ್ತು ದೀಪು ಎಸ್ ಕುಮಾರ್ ಸಂಕಲನ ಎಕ್ಕ ಸಿನಿಮಾಗಿದೆ. ಒಬ್ಬ ಮನುಷ್ಯ ಭೂಗತ ಜಗತ್ತಿಗೆ ತುತ್ತಾದಾಗ ಆತನಿಗೆ ಆಗುವ ಅನುಭವವನ್ನು ಈ ಚಿತ್ರದ ಮೂಲಕ ಹೇಳಲಾಗುತ್ತಿದೆಯಂತೆ.