ಬೆಂಗಳೂರು, ಮೇ 03: “ಕೃಷ್ಣಾ ನದಿ ನೀರಿನ ಹಂಚಿಕೆ ವಿಚಾರವಾಗಿ ನ್ಯಾಯಾಧಿಕರಣದ ತೀರ್ಪಿನ ಅನ್ವಯ ರಾಜ್ಯದ ಪಾಲಿನ ನೀರು ಬಳಕೆಗೆ ಕೇಂದ್ರ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಬೇಕು ಎಂದು ಇದೇ ತೀಂಗಳು 7ರಂದು ಕೇಂದ್ರ ಜಲಶಕ್ತಿ ಸಚಿವರು ಕರೆದಿರುವ ಸಭೆಯಲ್ಲಿ ಒತ್ತಡ ಹಾಕಲಾಗುವುದು. ಈ ಸಭೆಯ ನಂತರ ರಾಜ್ಯದಲ್ಲಿ ಸರ್ವಪಕ್ಷ ಸಭೆ ಕರೆದು ಚರ್ಚಿಸಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.
“2010ರಲ್ಲಿ ಕೃಷ್ಣಾ ನದಿ ನ್ಯಾಯಾಧಿಕರಣ ತೀರ್ಪಿನ ಬಗ್ಗೆ ಗೆಜೆಟ್ ಅಧಿಸೂಚನೆ ಹೊರಡಿಸುವ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ಒತ್ತಡ ಹಾಕಿದ್ದೇವೆ. ಹೀಗಾಗಿ ಕೇಂದ್ರ ಸಚಿವರು ಕರ್ನಾಟಕ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳ ಸಚಿವರ ಕರೆದಿದ್ದು, ಈ ಸಭೆಯಲ್ಲಿ ರಾಜ್ಯದ ನಿಲುವನ್ನು ಮಂಡಿಸುವ ಮುನ್ನ ಇಂದು ಪೂರ್ವಭಾವಿ ಸಭೆ ನಡೆಸಿದ್ದೇವೆ” ಎಂದರು.
“ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಇಂದಿನ ಸಭೆಯಲ್ಲಿ ಕಾನೂನು ಸಚಿವರು, ಸಂಬಂಧ ಪಟ್ಟ ಎಲ್ಲಾ ಜಿಲ್ಲಾ ಸಚಿವರುಗಳಾದ ಆರ್.ಬಿ ತಿಮ್ಮಾಪುರ, ಎಂ.ಬಿ ಪಾಟೀಲ್, ಶಿವಾನಂದ ಪಾಟೀಲ್, ದರ್ಶನಾಪುರ ಅವರ ಜತೆ ಚರ್ಚೆ ಮಾಡಿದ್ದೇವೆ. ಸಚಿವರು ಅನೇಕ ಸಲಹೆಗಳನ್ನು ನೀಡಿದ್ದಾರೆ. ಈ ಮಧ್ಯೆ ದೆಹಲಿ ವಕೀಲರ ತಂಡ ಕೂಡ ಸಭೆಯಲ್ಲಿ ಇದ್ದರು. ಮೇ 7ರ ಸಭೆಯಲ್ಲಿ ನಮ್ಮ ನಿಲುವು ಏನು, ನಮ್ಮ ತಂತ್ರಗಾರಿಕೆ ಏನು ಎಂದು ಚರ್ಚೆ ಮಾಡಲಾಗಿದೆ. ಕೇಂದ್ರದ ಸಭೆಯಲ್ಲಿ ಇಡೀ ತಂಡ ರಾಜ್ಯವನ್ನು ಪ್ರತಿನಿಧಿಸಿ ರಾಜ್ಯದ ನಿಲುವು ಮಂಡಿಸುತ್ತೇವೆ” ಎಂದು ತಿಳಿಸಿದರು.
“ಈ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆ ಮುಂದುವರಿಸಲು ಬೆಳಗಾವಿ ಅಧಿವೇಶನದಲ್ಲೇ ತೀರ್ಮಾನ ಮಾಡಿದ್ದೇವೆ. 2010ರಲ್ಲಿ ನ್ಯಾಯಾಧಿಕರಣದ ತೀರ್ಪು ಬಂದಿದ್ದು, ಈವರೆಗೂ ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಿಲ್ಲ. ಕಳೆದ 15 ವರ್ಷಗಳಲ್ಲಿ ನಮ್ಮ ರಾಜ್ಯಕ್ಕೆ ಭಾರಿ ನಷ್ಟವಾಗಿದೆ. ಹೀಗಾಗಿ ಈ ವಿಚಾರವಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದೇವೆ. ಪ್ರತಿ ವರ್ಷ ಯೋಜನಾ ವೆಚ್ಚದ ಪ್ರಮಾಣವೂ ಏರಿಕೆಯಾಗುತ್ತಿದೆ. ನೀರು ಅನಗತ್ಯವಾಗಿ ಪೋಲಾಗುತ್ತಿದ್ದು, ಇದನ್ನು ಬಳಸಿಕೊಳ್ಳಲು ಒತ್ತಡ ಹಾಕುತ್ತಿದ್ದೇವೆ. ಕೇಂದ್ರ ಸರ್ಕಾರ ನಮ್ಮ ಪರಿಸ್ಥಿತಿ ಅರಿತಿದ್ದು ಸಭೆ ಕರೆದಿರುವುದು ಸ್ವಾಗತಾರ್ಹ” ಎಂದರು.
ದಸರಾ ವೇಳೆಗೆ ಕಾವೇರಿ ಆರತಿ ಕಾರ್ಯಕ್ರಮ ಮಾಡಲು ಸಿದ್ಧತೆ:
“ಈ ವರ್ಷ ದಸರಾ ಹಬ್ಬದ ಜತೆಗೆ ಕಾವೇರಿ ಆರತಿ ಕಾರ್ಯಕ್ರಮ ಮಾಡಲು ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ. ತಮಿಳುನಾಡಿಗೆ ಪ್ರತಿ ವರ್ಷ 177 ಟಿಎಂಸಿ ನೀರನ್ನು ಬಿಡಬೇಕಿದೆ. ಕಾವೇರಿ ಆರತಿ ಘೋಷಣೆ ಮಾಡಿದ ನಂತರ ತಮಿಳುನಾಡಿಗೆ 295 ಟಿಎಂಸಿ ನೀರು ಹರಿದಿದೆ. ಆಮೂಲಕ 118 ಟಿಎಂಸಿ ನೀರು ಹೆಚ್ಚುವರಿಯಾಗಿ ಹರಿದಿದೆ. ಬೆಂಗಳೂರಿನಲ್ಲೂ ಸ್ಯಾಂಕಿ ಕೆರೆಯಲ್ಲಿ ವಿಶ್ವ ಜಲದಿನದಂದು ಆರತಿ ಕಾರ್ಯಕ್ರಮ ಮಾಡಲಾಗಿತ್ತು” ಎಂದು ಹೇಳಿದರು.
*ಕನ್ನಂಬಾಡಿ ಕಟ್ಟೆ ನಮ್ಮೆಲ್ಲರ ಅನ್ನದ ತಟ್ಟೆಯಾಗಿದೆ. ಈ ಭಾಗದ ರೈತರು ಭತ್ತ, ಕಬ್ಬು ಬೆಳೆಯುತ್ತಿದ್ದಾರೆ. ಕಾವೇರಿ ಆರತಿ ಕಾರ್ಯಕ್ರಮ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಲ್ಲ. ಕೊಡಗಿನಿಂದ ಹಿಡಿದು ಇಡೀ ಕರ್ನಾಟಕದ ಸಂಸ್ಕೃತಿ, ತಮಿಳುನಾಡಿ ಹಾಗೂ ಕೇರಳ ಸಂಪ್ರದಾಯಗಳನ್ನು ಒಳಗೊಂಡಂತೆ ಕಾರ್ಯಕ್ರಮ ನಡೆಸಲು ಚರ್ಚೆ ಮಾಡಲಾಗಿದೆ. ಈ ಕಾರ್ಯಕ್ರಮ ವಾರದಲ್ಲಿ ಎಷ್ಟು ದಿನ ಇರಬೇಕು, ಪೂಜಾ ಕಾರ್ಯಗಳು ಯಾವ ರೀತಿ ನೆರವೇರಬೇಕು ಎಂದು ಚರ್ಚೆ ಮಾಡಲಾಗಿದೆ. ಕಾವೇರಿ ನದಿಯಿಂದ ಎಲ್ಲಾ ವರ್ಗದ ಜನರಿಗೆ ಅನುಕೂಲವಾಗುತ್ತಿದೆ. ನಮ್ಮ ಧಾರ್ಮಿಕ ಹಾಗೂ ಸಂಸ್ಕೃತಿ ಒಳಗೊಂಡಂತೆ ಈ ಕಾರ್ಯಕ್ರಮವನ್ನು ನೀರಾವರಿ, ಪ್ರವಾಸೋದ್ಯಮ, ಧಾರ್ಮಿಕ ದತ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಹಯೋಗದಲ್ಲಿ ನಡೆಸಲಾಗುವುದು” ಎಂದರು.
“ಈ ಕಾರ್ಯಕ್ರಮ ಸಂಬಂಧ ಬಿಡಬ್ಲ್ಯೂ ಎಸ್ಎಸ್ ಬಿ ಮುಖ್ಯಸ್ಥರಾದ ರಾಮ್ ಪ್ರಸಾತ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಮಂಡ್ಯ ಉಪ ಆಯುಕ್ತರು ಇದರ ಉಸ್ತುವಾರಿ ವಹಿಸಲಿದ್ದಾರೆ. ಧಾರ್ಮಿಕ ದತ್ತಿ ಇಲಾಖೆ ಪೂಜಾ ಕಾರ್ಯಕ್ರಮಗಳ ರೂಪುರೇಷೆ ನೋಡಿಕೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ರೂಪ ನೀಡಲು ಕನ್ನಡ ಮತ್ತು ಸಂಸ್ಕೃತಿ ಜವಾಬ್ದಾರಿ ವಹಿಸಿಕೊಳ್ಳಲಿದೆ. ನೀರಾವರಿ ಇಲಾಖೆಯಿಂದ ಈ ಕಾರ್ಯಕ್ರಮಕ್ಕೆ ಅಗತ್ಯ ಮೂಲಸೌಕರ್ಯ ವಹಿಸಲಾಗುವುದು. ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಲು ಪ್ರವಾಸೋದ್ಯಮ ಇಲಾಖೆ ಸಲಹೆ ನೀಡಲಿದೆ. ಇದರ ಜತೆಗೆ ವಿಶೇಷ ದೀಪಾಲಂಕಾರ, ಕಾರಂಜಿ ವ್ಯವಸ್ಥೆ ಮಾಡಲಾಗುವುದು. ಪ್ರವಾಸಿಗರಿಗೆ ಆಕರ್ಷಣೀಯವಾಗಿ ಕಾರ್ಯಕ್ರಮ ರೂಪಿಸಲಾಗಿದ್ದು, ಬೆಂಗಳೂರು, ಮೈಸೂರಿನಿಂದ ಜನರು ಹೋಗಿ ಪೂಜೆ ಸಲ್ಲಿಸಿ ವಾಪಸ್ಸಾಗಲು ಅನುಕೂಲವಾಗುವಂತೆ ರಸ್ತೆ ಉನ್ನತೀಕರಣ ಮಾಡಲು ಲೋಕೋಪಯೋಗಿ ಇಲಾಖೆಗೆ ಸೂಚಿಸಲಾಗಿದೆ” ಎಂದರು.
“ಇನ್ನು ನಾಲ್ಕು ಗ್ರಾಮ ಪಂಚಾಯ್ತಿಗಳನ್ನು ಸೇರಿಸಿ ಯೋಜನಾ ಪ್ರಾಧಿಕಾರವನ್ನು ಮಾಡಲು ತೀರ್ಮಾನಿಸಲಾಗಿದೆ. ಉಳಿದಂತೆ ಇದಕ್ಕೆ ಸಂಬಂಧಪಟ್ಟ ಟೆಂಡರ್ ಕರೆಯಲು ಸೂಚಿಸಲಾಗಿದೆ. ನೀರಾವರಿ ಇಲಾಖೆಯಿಂದ ಇದಕ್ಕೆ ಸುಮಾರು 100 ಕೋಟಿಯಷ್ಟು ಹಣ ಮೀಸಲಿಡಲಾಗಿದೆ. ಧಾರ್ಮಿಕ ದತ್ತಿ ಇಲಾಖೆ, ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳು ಕೂಡ ಇದರ ಜವಾಬ್ದಾರಿ ವಹಿಸಲಿವೆ” ಎಂದರು.
ಇಂತಹ ಕಾರ್ಯಕ್ರಮಕ್ಕೆ ಅನುದಾನ ನೀಡುವುದು ಕಷ್ಟ ಎಂದು ಆರ್ಥಿಕ ಇಲಾಖೆ ಶಿಫಾರಸ್ಸು ಮಾಡಿದೆಯೇ ಎಂದು ಕೇಳಿದ ಪ್ರಶ್ನೆಗೆ, “ಯಾರು ಏನೇ ಶಿಫಾರಸ್ಸು ಮಾಡಿದರೂ ಅಂತಿಮವಾಗಿ ಸರ್ಕಾರ ಅಂತಿಮ ತೀರ್ಮಾನ ಮಾಡುತ್ತದೆ. ಈ ಕಾವೇರಿ ಆರತಿ ಮಾಡಲು ನಮ್ಮ ಸರ್ಕಾರ ನಿರ್ಧರಿಸಿದೆ” ಎಂದು ತಿಳಿಸಿದರು.
ಕಾವೇರಿ ಆರತಿ ಕಾರ್ಯಕ್ರಮದಲ್ಲಿ ಎಷ್ಟು ಜನರು ವೀಕ್ಷಣೆ ಮಾಡಲು ಅವಕಾಶವಿದೆ ಎಂದು ಕೇಳಿದಾಗ, “ಈಗ ಸುಮಾರು 10 ಸಾವಿರ ಜನ ಈ ಕಾರ್ಯಕ್ರಮವನ್ನು ವೀಕ್ಷಣೆ ಮಾಡಲು ಅವಕಾಶ ಕಲ್ಪಿಸಲು ಯೋಜನೆ ರೂಪಿಸಲಾಗುತ್ತಿದೆ. ಇದಕ್ಕೆ ಯಾವ ರೀತಿ ಆಸನ ವ್ಯವಸ್ಥೆ ಮಾಡಬೇಕು? ಎಷ್ಟು ಜಾಗದ ಅಗತ್ಯವಿದೆ, ಮಳೆ ಬಂದರೆ ಏನು ಮಾಡಬೇಕು, ಕಲಾವಿದರು, ಪೂಜೆ ನೆರವೇರಿಸುವರಿಗೆ ಸ್ಥಳಾವಕಾಶ ಸೇರಿದಂತೆ ಎಲ್ಲಾದಕ್ಕೂ ನೀಲನಕ್ಷೆ ರೂಪಿಸುವಂತೆ ಸಮಿತಿಗೆ ಸೂಚಿಸಿದ್ದೇನೆ. ಅವರು ಅಂತಿಮ ಯೋಜನೆ ರೂಪಿಸಲಿದ್ದಾರೆ. ಕಾವೇರಿ ನದಿಗೆ ಸಂಬಂಧಿಸಿದಂತೆ ಧಾರ್ಮಿಕವಾದ ಸಂಗೀತ ಮಾಡಲು ಆಸಕ್ತಿ ಇರುವವರಿಗೆ ಅವಕಾಶ ಕಲ್ಪಿಸಲಾಗುವುದು” ಎಂದು ತಿಳಿಸಿದರು.
ಕಾವೇರಿ ನಗಮದಲ್ಲಿ ಈ ಕಾರ್ಯಕ್ರಮಕ್ಕೆ 60 ಕೋಟಿ ಹಣ ಮೀಸಲಿಟ್ಟಿದ್ದು, ಸಚಿವ ಸಂಪುಟ ಸಭೆಯಲ್ಲಿ 92 ಕೋಟಿಗೆ ನುಮೋದನೆ ನೀಡಲಾಗಿದೆ. 32 ಕೋಟಿಯ ವ್ಯತ್ಯಾಸ ಏಕೆ ಎಂದು ಕೇಳಿದಾಗ, “ನಾವು ಈ ಕಾರ್ಯಕ್ರಮಕ್ಕಾಗಿ ಪ್ರತ್ಯೇಕವಾದ ಮೂಲಸೌಕರ್ಯಗಳನ್ನು ಕಲ್ಪಿಸಬೇಕಿದೆ. ಇದಕ್ಕೆ ಭದ್ರತೆ, ಸಂಚಾರಿ ವ್ಯವಸ್ಥೆ, ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಬೇಕು. ಈಗ ಇರುವ ವ್ಯವಸ್ಥೆಯನ್ನು ಹೊರತುಪಡಿಸಿ ಹೊಸದಾಗಿ ವ್ಯವಸ್ಥೆ ಕಲ್ಪಿಸಬೇಕಿದೆ. ಸಾಂಸ್ಕೃತಿಕ ಹಾಗೂ ಧಾರ್ಮಿಕ ತಂಡಗಳಿಗೆ ಎಲ್ಲಾ ರೀತಿಯ ಸೌಕರ್ಯ ಕಲ್ಪಿಸಬೇಕು. ಇವರಿಗೆ ದೂರದಲ್ಲಿ ವ್ಯವಸ್ಥೆ ಮಾಡಲು ಆಗುವುದಿಲ್ಲ. ವೇದಿಕೆ ಸಮೀಪದಲ್ಲೇ ಮಾಡಬೇಕಿದೆ. ವೇದಿಕೆ ನಾಲ್ಕು ದಿಕ್ಕಿನಲ್ಲೂ ಕಾಣಬೇಕು. ಶುಲ್ಕ ಪಾವತಿಸಿ ಕಾರ್ಯಕ್ರಮ ವೀಕ್ಷಣೆ ಹಾಗೂ ಉಚಿತವಾಗಿ ಕಾರ್ಯಕ್ರಮ ವೀಕ್ಷಣೆಗೆ ಅವಕಾಶ ಕಲ್ಪಿಸಬೇಕಿದೆ. ಸಾರ್ವಜನಿಕರಿಗೆ ಪೂಜೆ ಮಾಡುವ ಅವಕಾಶ ಕಲ್ಪಿಸಬೇಕಿದೆ. ಈ ಎಲ್ಲ ಪ್ರಕ್ರಿಯೆಗಳನ್ನು ಪಾರದರ್ಶಕವಾಗಿ ಮಾಡಲಾಗುವುದು” ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಆಣೆಕಟ್ಟಿನ ಸಮೀಪ ಮಾಡಲಾಗುವುದೇ ಎಂದು ಕೇಳಿದಾಗ, “ಈ ಕಾರ್ಯಕ್ರಮದ ವೇದಿಕೆಯನ್ನು ಆಣೆಕಟ್ಟಿನಿಂದ ಸ್ವಲ್ಪ ದೂರದಲ್ಲಿ, ಸದಾ ನೀರು ಇರುವಂತಹ ಜಾಗದಲ್ಲಿ ಮಾಡಬೇಕಿದೆ. ಬೆಂಗಳೂರಿಗೆ ನೀರು ಹೋಗುವ ಒಂದು ಜಾಗವನ್ನು ಗುರುತಿಸಲಾಗಿದೆ. ಭದ್ರತಾ ದೃಷ್ಟಿಯಿಂದ ಆಣೆಕಟ್ಟಿನಿಂದ ಸ್ವಲ್ಪ ದೂರವೇ ಮಾಡುತ್ತಿದ್ದೇವೆ. ಇದರ ಜವಾಬ್ದಾರಿಯನ್ನು ತಾಂತ್ರಿಕ ಸಮಿತಿಗೆ ವಹಿಸಿದ್ದು, ಆ ಸಮಿತಿ ಇದನ್ನು ಅಂತಿಮವಾಗಿ ತೀರ್ಮಾನಿಸಲಿದೆ” ಎಂದು ತಿಳಿಸಿದರು.
ಕಾವೇರಿ ಆರತಿ ಯಾವಾಗ ನಡೆಯಲಿದೆ ಎಂದು ಕೇಳಿದಾಗ, “ದಸರಾ ಜತೆಗೆ ಈ ಕಾರ್ಯಕ್ರಮ ಮಾಡಬೇಕು ಎಂಬುದು ನಮ್ಮ ಇಚ್ಛೆ. ಅದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ” ಎಂದು ತಿಳಿಸಿದರು.
ವಾರಣಾಸಿಯ ಗಂಗಾ ಆರತಿ ತಂಡವೇ ಇಲ್ಲಿಯೂ ಕಾರ್ಯಕ್ರಮ ಮಾಡಲಿದೆಯೇ ಎಂದು ಕೇಳಿದಾಗ, “ನಾವು ತುಂಗಾ ಆರತಿ, ಕಾವೇರಿ ಆರತಿ ಮಾಡಿದ್ದೇವೆ. ಬೇರೆ ರಾಜ್ಯಗಳಲ್ಲಿ ಇಂತಹ ಕಾರ್ಯಕ್ರಮ ನೋಡಿದ್ದೇವೆ. ನಮ್ಮ ರಾಜ್ಯದ ತಂಡದವರೇ ಈ ಕಾರ್ಯಕ್ರಮ ಮಾಡಲಿದ್ದಾರೆ” ಎಂದು ತಿಳಿಸಿದರು.