ದಾಖಲೆಗಳ ಸರದಾರ ವಿರಾಟ್ ಕೊಹ್ಲಿ ಅವರು ಟಿ20 ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ಬರೆದಿದ್ದಾರೆ. ಶುಕ್ರವಾರ ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆದ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಕೊಹ್ಲಿ 25 ಎಸೆತಗಳಲ್ಲಿ 43 ರನ್ ಬಾರಿಸಿದ್ದರು.
43 ರನ್ಗಳಲ್ಲಿ 1 ಭರ್ಜರಿ ಸಿಕ್ಸ್ ಹಾಗೂ 7 ಫೋರ್ಗಳು ಒಳಗೊಂಡಿದ್ದವು. ಈ ಏಳು ಫೋರ್ಗಳೊಂದಿಗೆ ಟಿ20 ಕ್ರಿಕೆಟ್ನಲ್ಲಿ ಒಂದೇ ತಂಡದ ಪರ 800 ಫೋರ್ಗಳನ್ನು ಬಾರಿಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ವಿರಾಟ್ ಕೊಹ್ಲಿ ನಿರ್ಮಿಸಿದ್ದಾರೆ. ಅಂದರೆ ಕಿಂಗ್ ಕೊಹ್ಲಿ ಆರ್ಸಿಬಿ ಪರ ಈವರೆಗೆ 800+ ಫೋರ್ಗಳನ್ನು ಬಾರಿಸಿದ್ದಾರೆ.
ವಿರಾಟ್ ಕೊಹ್ಲಿಯನ್ನು ಹೊರತುಪಡಿಸಿದರೆ ವಿಶ್ವದ ಯಾವುದೇ ಬ್ಯಾಟರ್ ಒಂದೇ ತಂಡದ ಪರ 800 ಫೋರ್ಗಳನ್ನು ಬಾರಿಸಿಲ್ಲ. ಇದಕ್ಕೂ ಮುನ್ನ ಇಂಗ್ಲೆಂಡ್ನ ಜೇಮ್ಸ್ ವಿನ್ಸ್ ಹ್ಯಾಂಪ್ಶೈರ್ ತಂಡದ ಪರ 694 ಫೋರ್ಗಳನ್ನು ಬಾರಿಸಿರುವುದು ಸರ್ವಶ್ರೇಷ್ಠ ದಾಖಲೆಯಾಗಿತ್ತು.
ಆದರೆ ಈ ದಾಖಲೆಯನ್ನು ಅಳಿಸಿ ಹಾಕಿರುವ ವಿರಾಟ್ ಕೊಹ್ಲಿ ಇದೀಗ 800 ಫೋರ್ಗಳ ಮೈಲುಗಲ್ಲು ದಾಟಿದ್ದಾರೆ.