ಅರ್ಚನಾ ಉಡುಪ ಗಾಯಕಿಯಾಗಿ ಮಿಂಚಿರುವ ಅವರು ಹಲವು ಸುಮಧುರ ಗೀತೆಗಳನ್ನು ನೀಡಿದ್ದಾರೆ. ಇದೀಗ ಅರ್ಚನಾ ಬಗ್ಗೆ ಕೆಲವರು ಅಪಪ್ರಚಾರ ಮಾಡಿದ್ದಾರೆ. ಅವರಿಗೆ ಗಂಭೀರ ಆರೋಗ್ಯ ಸಮಸ್ಯೆ ಇದೆ ಎಂದು ಗಾಸಿಪ್ ಹಬ್ಬಿಸಲಾಗಿದೆ. ಅಲ್ಲದೇ, ಕ್ಯಾನ್ಸರ್ ಇದೆ ಎಂದೆಲ್ಲ ಮಾತನಾಡಿಕೊಳ್ಳಲಾಗಿದೆ.
ಆದ್ದರಿಂದ ಅರ್ಚನಾ ಉಡುಪ ಅವರು ಬೇಸರದಿಂದ ಒಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರ ಆರೋಗ್ಯದ ಬಗ್ಗೆ ಕೆಲವರು ವದಂತಿಗಳನ್ನು ಹಬ್ಬಿಸುತ್ತಿದ್ದು, ಆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. “ನನ್ನನ್ನು ಬಹಳ ದಿನಗಳಿಂದ ಕಾಡುತ್ತಿರುವ ವಿಷಯವನ್ನು ನಿಮ್ಮ ಜೊತೆ ಹಂಚಿಕೊಳ್ಳಲೇಬೇಕು. ಇದರಿಂದ ಮನಸ್ಸಿಗೆ ಬಹಳ ನೋವಾಗಿದೆ. ಇನ್ನು ಮುಂದಾದರೂ ಯಾರಿಗೂ ಹೀಗಾಗದಂತೆ ಜಾಗ್ರತೆವಹಿಸಿ” ಎಂದು ಅರ್ಚನಾ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
View this post on Instagram
“ಮೂರ್ನಾಲ್ಕು ವರ್ಷದ ಹಿಂದೆ ನಾನೊಂದು ಸಂದರ್ಶನ ನೀಡಿದ್ದೆ. ನನಗೆ 20 ವರ್ಷಗಳ ಹಿಂದೆ ನನಗಿದ್ದ ಗಂಟಲಿನ ಕಿರಿಕಿರಿ ಇತ್ತು, ಆಗ ನನಗೆ ಹಾಡಲು ಸಾಧ್ಯವಾಗುತ್ತಿರಲಿಲ್ಲ ಎಂಬುದನ್ನು ಆ ಇಂಟರ್ವ್ಯೂನಲ್ಲಿ ಮಾತನಾಡಿದ್ದೆ. ಆ ಕಿರಿಕಿರಿಯಿಂದ ನಾನು ಹೇಗೆ ಆಚೆ ಬಂದೆ, ಮತ್ತೆ ಹೇಗೆ ಹಾಡುವುದಕ್ಕೆ ಆರಂಭಿಸಿದೆ ಅನ್ನೋದನ್ನು ಕೂಡ ಹೇಳಿದ್ದೆ. ಆದರೆ ಅವರು ಅದರ ಕ್ಲಿಪ್ ಅನ್ನು ಮಾತ್ರ ಪ್ರಮೋಷನ್‌ಗೆ ಹಂಚಿಕೊಂಡಿದ್ದಾರೆ” ಎಂದು ಕನ್ನಡ ಗಾಯಕಿ ಅರ್ಚನಾ ಉಡುಪ ಹೇಳಿದ್ದಾರೆ.
ಕೆಲವರು ಪೂರ್ತಿ ವಿಡಿಯೋ ನೋಡದೇ ಪ್ರೋಮೋವನ್ನೂ ಮಾತ್ರ ನೋಡಿಕೊಂಡು, ನನಗೆ ಹಾಡೋಕೆ ಆಗ್ತಿಲ್ಲ, ಹಾಡೋದನ್ನೇ ನಿಲ್ಲಿಸಿದ್ದೇನೆ ಅಂತ ವದಂತಿ ಹಬ್ಬಿಸುತ್ತಿದ್ದಾರೆ. ಇದು ನನ್ನ ಮನಸಿಗೆ ತುಂಬಾ ಬೇಸರ ಉಂಟು ಮಾಡುತ್ತಿದೆ. ಎಲ್ಲಿಗೆ ಹೋದರೂ ನೀವು ಆರಾಮಾಗಿ ಇದ್ದೀರಾ? ಹಾಡೋಕೆ ಆಗ್ತಾ ಇದ್ದೀಯಾ ಅಂತಾರೆ. ಆದರೆ ನಾನೀಗ ಮೊದಲಿಗಿಂತ ಹೆಚ್ಚು ಹಾಡುತ್ತಿದ್ದೇನೆ” ಎಂದು ಅರ್ಚನಾ ಉಡುಪ ಹೇಳಿದ್ದಾರೆ.
ಇನ್ನೊಂದು ವಿಷಯ ಏನಪ್ಪ ಅಂದರೆ, ನನ್ನ ಶಾರ್ಟ್ ಹೇರ್ ಕಟ್ ಬಗ್ಗೆ ಚರ್ಚೆ ಆಗುತ್ತಿದೆ. ನಾನ್ಯಾಕೆ ಶಾರ್ಟ್ ಹೇರ್ ಕಟ್ ಮಾಡಿಸಿದ್ದೇನೆ ಎಂದರೆ, ಒಂದು ಚಾನೆಲ್‌ನವರು ನನಗೆ ಸೀರಿಯಲ್ ಆಫರ್ ನೀಡಿದ್ದಾರೆ. ಅದರಲ್ಲಿ ನನಗೆ ರೀತಿ ಗೆಟಪ್ ಇದೆ. ಹಾಗಾಗಿ, ಶಾರ್ಟ್ ಹೇರ್ ಕಟ್ ಮಾಡಿಸಿದ್ದೇನೆ. ಅದುಬಿಟ್ಟರೇ ನನಗೆ ಯಾವುದೇ ಆರೋಗ್ಯ ಸಮಸ್ಯೆಯೂ ಇಲ್ಲ. ಕೆಲವರಂತೂ ಏನೇನೋ ಊಹಾಪೋಹಗಳನ್ನು ಮಾಡಿಕೊಂಡಿದ್ದಾರೆ” ಎಂದು ಅರ್ಚನಾ ಉಡುಪ ತಿಳಿಸಿದ್ದಾರೆ.
ನನಗೆ ಕ್ಯಾನ್ಸರ್ ಬಂದಿದೆ ಅನ್ನೋ ಲೆವೆಲ್‌ಗೆ ಮಾತನಾಡಿಬಿಟ್ಟಿದ್ದಾರೆ. ಇದರಿಂದ ನನಗಿಂತ ಹೆಚ್ಚಾಗಿ ನನ್ನ ತಂದೆ ತಾಯಿಗಳಿಗೆ, ನನ್ನ ಬಂಧುಗಳಿಗೆ, ಫ್ರೆಂಡ್ಸ್‌ಗೆ ತುಂಬ ನೋವಾಗಿದೆ. ಪಾಡ್ ಕಾಸ್ಟ್, ಯೂಟ್ಯೂಬ್, ಸೋಶಿಯಲ್ ಮೀಡಿಯಾದಲ್ಲಿ ಸಣ್ಣ ಸಣ್ಣ ವಿಡಿಯೋ ಕ್ಲಿಪ್‌ಗಳನ್ನು ನೋಡಿ, ಏನೇನೋ ಊಹಿಸಿಕೊಳ್ಳಬೇಡಿ. ದಯವಿಟ್ಟು ಪೂರ್ತಿ ವಿಷಯ ತಿಳಿದುಕೊಳ್ಳಿ. ಆಗ ವೃತ್ತಿ ಬದುಕಿಗೆ, ವೈಯಕ್ತಿಕ ಬದುಕಿಗೆ ತುಂಬಾ ದೊಡ್ಡ ಘಾಸಿ ಆಗುವುದು ತಪ್ಪುತ್ತದೆ. ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲಿರಲಿ. ದೇವರ ದಯೆಯಿಂದ ನಾನು ಆರೋಗ್ಯವಾಗಿ, ಗಟ್ಟಿಮುಟ್ಟಾಗಿ ಇದ್ದೇನೆ” ಎಂದು ಅರ್ಚನಾ ಉಡುಪ ಹೇಳಿಕೊಂಡಿದ್ದಾರೆ.