ಶುಕ್ರವಾರ ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಭಾರೀ ಅಂತರದಿಂದ ಸನ್ ರೈಸರ್ಸ್ ಹೈದರಾಬಾದ್ ತಂಡ ಸೋಲಿಸಿದೆ.
ಟಾಸ್ ಗೆದ್ದ ಆರ್ ಸಿಬಿ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ರಜತ್ ಪಟಿದಾರ್ ಬೆರಳಿಗೆ ಗಾಯವಾಗಿದ್ದರಿಂದ ಜಿತೇಶ್ ಶರ್ಮಾ ನಾಯಕತ್ವ ವಹಿಸಿಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 231 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಅಭಿಷೇಕ್ ಶರ್ಮಾ 17 ಎಸೆತಗಳಲ್ಲಿ 34 ರನ್ ಗಳಿಸುವ ಮೂಲಕ ಸ್ಫೋಟಕ ಆರಂಭ ನೀಡಿದರು. ಟ್ರಾವಿಸ್ ಹೆಡ್ 17 ರನ್ ಗಳಿಸಿ ಔಟಾದರು.
ಇಶಾನ್ ಕಿಶನ್ ಜವಾಬ್ದಾರಿಯುತ ಬ್ಯಾಟಿಂಗ್ ಮಾಡುವ ಮೂಲಕ ಸನ್‌ರೈಸರ್ಸ್ ಹೈದರಾಬಾದ್ ಬೃಹತ್ ಮೊತ್ತ ಕಲೆಹಾಕಲು ನೆರವಾದರು. 48 ಎಸೆತಗಳಲ್ಲಿ 7 ಬೌಂಡರಿ 5 ಸಿಕ್ಸರ್ ಸಹಿತ ಅಜೇಯ 94 ರನ್ ಗಳಿಸಿದರು. ಹೆನ್ರಿಚ್ ಕ್ಲಾಸೆನ್ 13 ಎಸೆತಗಳಲ್ಲಿ 24 ರನ್ ಗಳಿಸಿದರೆ, ಅನಿಕೇತ್ ವರ್ಮಾ 9 ಎಸೆತಗಳಲ್ಲಿ 26 ರನ್ ಗಳಿಸಿದರು.
ಆರ್ ಸಿಬಿ ಪರ ಜೋಶ್ ಹೇಜಲ್‌ವುಡ್ ಇಲ್ಲದೇ ಇರುವುದು ದೊಡ್ಡ ಕೊರತೆಯಾಗಿ ಕಾಡಿತು. ರೊಮಾರಿಯೋ ಶೆಫರ್ಡ್ 2 ಓವರ್ ಗಳಲ್ಲಿ 14 ರನ್ ನೀಡಿ 2 ವಿಕೆಟ್ ಪಡೆದರೆ. ಉಳಿದ ಬೌಲರ್ ಗಳು ದುಬಾರಿಯಾದರು.
232 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಆರ್ ಸಿಬಿ 19.5 ಓವರ್ ಗಳಲ್ಲಿ 189 ರನ್‌ಗಳಿಗೆ ಆಲೌಟ್ ಆಗುವ ಮೂಲಕ 42 ರನ್‌ಗಳ ಭಾರಿ ಸೋಲು ಕಂಡಿತು. ವಿರಾಟ್ ಕೊಹ್ಲಿ 25 ಎಸೆತಗಳಲ್ಲಿ 43 ರನ್ ಗಳಿಸಿದರೆ, ಫಿಲ್ ಸಾಲ್ಟ್ 32 ಎಸೆತಗಳಲ್ಲಿ 62 ರನ್ ಗಳಿಸಿದರು. ಇವರಿಬ್ಬರೂ ಔಟಾದ ಬಳಿಕ ಆರ್ ಸಿಬಿ ಗೆಲುವಿನ ಹಾದಿ ಕಳೆದುಕೊಂಡಿತು.
ಮಯಾಂಕ್ ಅಗರ್ವಾಲ್ 11 ರನ್, ರಜತ್ ಪಟಿದಾರ್ 18 ರನ್, ಜಿತೇಶ್ ಶರ್ಮಾ 24 ರನ್ ಗಳಿಸಿದರೆ, ರೊಮಾರಿಯೋ ಶೆಫರ್ಡ್ ಮೊದಲ ಎಸೆತದಲ್ಲೇ ಔಟಾದರು. ಫೀಲ್ಡಿಂಗ್ ವೇಳೆ ಟಿಮ್ ಡೇವಿಡ್ ಗಾಯಗೊಂಡಿದ್ದು ಕೂಡ ಆರ್ ಸಿಬಿ ಸೋಲಿಗೆ ಪ್ರಮುಖ ಕಾರಣವಾಯಿತು. ಈ ಸೋಲು ಆರ್ ಸಿಬಿ ರನ್‌ರೇಟ್‌ಗೆ ಹೊಡೆತ ಕೊಟ್ಟಿದ್ದು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದೆ.