ಮೈಸೂರು ಸ್ಯಾಂಡಲ್ ಸೋಪ್ ವಿವಾದವೀಗ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಕನ್ನಡದಲ್ಲಿಯೂ ಒಳ್ಳೊಳ್ಳೆ ನಟಿಯರು ಇದ್ರೂ ಪಕ್ಕದ ಇಂಡಸ್ಟ್ರೀಗೆ ತಮನ್ನಾ ಭಾಟಿಯಾರನ್ನು ರಾಯಭಾರಿಯಾಗಿ ಮಾಡಿದ್ದಕ್ಕೆ ಭಾರೀ ಟೀಕೆಗಳಯ ವ್ಯಕ್ತವಾಗುತ್ತಿವೆ. ತಮನ್ನಾಗೆ 6 ಕೋಟಿಗೂ ಅಧಿಕ ಸಂಭಾವನೆ ಕೊಟ್ಟು ಮೈಸೂರು ಸ್ಯಾಂಡಲ್ ಸೋಪ್ ಗೆ ರಾಯಭಾರಿಯಾಗಿ ರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ (ಕೆಎಸ್ಡಿಎಲ್) ಸಂಸ್ಥೆ ನೇಮಿಸಿದೆ. ಕರ್ನಾಟಕದ ಹೆಮ್ಮೆಯ ಸಂಕೇತವಾಗಿರುವ ಮೈಸೂರು ಸ್ಯಾಂಡಲ್ ಸೋಪನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಉದ್ದೇಶದಿಂದ ನಟಿ ತಮನ್ನಾ ಭಾಟಿಯಾ ಅವರನ್ನು ಪ್ರಚಾರ ರಾಯಭಾರಿಯನ್ನಾಗಿ ನೇಮಿಸಿಕೊಳ್ಳಲಾಗಿದೆ ಸಚಿವ ಎಂಬಿ ಪಾಟೀಲ್ ಸಬೂಬು ನೀಡುತ್ತಿದ್ದಾರೆ. ಇದೀಗ ಈ ವಿವಾದಕ್ಕೆ ಮೋಹಕತಾರೆ ರಮ್ಯಾ ರಿಯಾಕ್ಟ್ ಮಾಡಿದ್ದಾರೆ.
ರಮ್ಯಾ ವಾದವೇನು?
ಉತ್ಪನ್ನಗಳ ಪ್ರಮೋಷನ್‌ಗೆ ರಾಯಭಾರಿಗಳನ್ನು ನೇಮಿಸುವುದು ಹಳೆಯ ಸಂಪ್ರದಾಯ. ಇದರಿಂದ ತೆರಿಗೆ ಪಾವತಿದಾರರ ಹಣ ವ್ಯರ್ಥಮಾಡಿದಂತಾಗುತ್ತದೆ. ಒಂದು ಉತ್ಪನ್ನಕ್ಕೆ ಜನ ಗ್ರಾಹಕರಾಗಲು, ಆ ಉತ್ಪನ್ನ ಉತ್ತಮವಾಗಿರಬೇಕು. ನಮ್ಮ ಮೈಸೂರು ಸ್ಯಾಂಡಲ್ ಸೋಪ್ ಉತ್ತಮ ಉತ್ಪನ್ನವಷ್ಟೇ ಅಲ್ಲ, ಅದು ನಮ್ಮ ಪರಂಪರೆಯಯಾಗಿದೆ. ಮೈಸೂರು ಸ್ಯಾಂಡಲ್ ಸೋಪ್ ಬಳಸಿದ ಪ್ರತಿಯೊಬ್ಬ ವ್ಯಕ್ತಿಯು ಅದರ ರಾಯಭಾರಿ. ಪ್ರತಿಯೊಬ್ಬ ಕನ್ನಡಿಗ ಸಹ ಅದರ ರಾಯಭಾರಿ, ಅದನ್ನು ಪ್ರತಿಯೊಬ್ಬ ಕನ್ನಡಿಗನು ಉಚಿತವಾಗಿ ಜಗತ್ತಿಗೆ ಪರಿಚಯ ಮಾಡಿಕೊಡುವ ಕೆಲಸ ಮಾಡುತ್ತಾನೆ. ಪಿ.ಎಸ್. ಆಪಲ್ ಒಂದು ಯಶಸ್ವಿ ಬ್ರ್ಯಾಂಡ್, ಅದು ‘ಬ್ರಾಂಡ್ ಅಂಬಾಸಿಡರ್‌ನ್ನು ಹೊಂದಿಲ್ಲ. ರಾಯಭಾರಿಗಾಗಿ ಆ ಕಂಪನಿ ಹಣ ವ್ಯಯಿಸುವುದಿಲ್ಲ. ಇನ್ನೂ ನಾನು ಕಂಡಂತೆ ಡವ್ ಸೋಪ್‌ನದ್ದು ಅತ್ಯುತ್ತಮ ಅಭಿಯಾನಗಳಲ್ಲಿ ಒಂದು.
-ರಮ್ಯಾ, ನಟಿ
ಮೈಸೂರು ಸ್ಯಾಂಡಲ್ ಸೋಪ್‌ಗೆ ತಮ್ನನಾ ರಾಯಭಾರಿಯಾಗಿ ಆಯ್ಕೆ ಮಾಡಿರುವುದರಿಂದ ರಮ್ಯಾ, ಇನ್ಸ್ಟಾದಲ್ಲಿ ಸ್ಟೋರಿಯಲ್ಲಿ ಈ ರೀತಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿಯಾಗಿ ಬಹುಭಾಷಾ ನಟಿ ತಮನ್ನಾ ಅವರನ್ನ 2 ವರ್ಷ ಅವಧಿಗೆ 6 ಕೋಟಿ ರೂ.ಗೆ ನೇಮಕ ಮಾಡಿರುವುದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಕನ್ನಡ ಮೂಲದ ಸಂಸ್ಥೆ ಮತ್ತು ಸೋಪಿಗೆ ಕನ್ನಡ ನಟಿಯರು ಯಾರೂ ಸಿಗಲಿಲ್ಲವೇ ಎಂಬ ಪ್ರಶ್ನೆಯನ್ನು ಕನ್ನಡಪರ ಸಂಘಟನೆಗಳು ವ್ಯಕ್ತಪಡಿಸಿದ್ದರು.