ಬೆಂಗಳೂರು : ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕ್ ಮೂಲದ ಭಯೋತ್ಪಾದಕರು ದುಷ್ಕೃತ್ಯ ಎಸಗಿದ್ದು, ಉಗ್ರರ ದಾಳಿಯಲ್ಲಿ ಇಬ್ಬರು ಕನ್ನಡಿಗರು ಸೇರಿ 27ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ಕಾಶ್ಮೀರದ ಸೊಬಗನ್ನು ಸವಿಯುತ್ತಿದ್ದ . ಪ್ರವಾಸಿಗರ ಮೇಲೆ ಉಗ್ರರು ಗುಂಡಿನ ದಾಳಿ ಮಾಡಿದ್ದಾರೆ . ಬೈಸರನ್ ಕಣಿವೆಯಲ್ಲಿ ಟ್ರಕಿಂಗ್ ಗೆ ಹೋಗಿದ್ದ ಪ್ರವಾಸಿಗರ ಮೇಲೆ ಉಗ್ರರು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ.
ಇನ್ನೂ ಸುದ್ದಿ ತಿಳಿಯುತ್ತಿದ್ದಂತೆ ಸಿಎಂ ಸಿದ್ದರಾಮಯ್ಯಅವರು ಅಧಿಕಾರಿಗಳ ಸಭೆ ನಡೆಸಿ ಮುಖ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದು, ತಕ್ಷಣ ಕಾರ್ಯಪ್ರವತ್ತರಾಗುವಂತೆ ಸೂಚನೆ ನೀಡಿದ್ದಾರೆ. ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಅಧಿಕಾರಿಗಳ ಒಂದು ತಂಡ ಕನ್ನಡಿಗರ ನೆರವಿಗೆ ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿದೆ.
ಉಗ್ರರ ಹೇಯಕೃತ್ಯಕ್ಕೆ ತೀವ್ರ ಖಂಡನೆ
ಇನ್ನೂ ಉಗ್ರರ ದಾಳಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಖಂಡಿಸಿದ್ದು, ಪ್ರವಾಸಿಗರ ಮೇಲಿನ ಉಗ್ರರ ಗುಂಡಿನ ದಾಳಿ ಆಘಾತ, ನೋವು ತಂದಿದೆ. ಇದು ಒಂದು ಹೇಯ ಮತ್ತು ಅಮಾನವೀಯ ಕೃತ್ಯವಾಗಿದ್ದು, ಇದನ್ನು ನಿಸ್ಸಂದೇಹವಾಗಿ ಖಂಡಿಸಬೇಕು. ಪ್ರವಾಸಿಗರ ಮೇಲಿನ ಉಗ್ರ ದಾಳಿ ಕ್ಷಮಿಸಲಾಗದ ಕೃತ್ಯ ಎಂದು ಟ್ವೀಟ್ ಮಾಡಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟ್ವೀಟ್ ಮಾಡಿದ್ದು, ಪ್ರವಾಸಿಗರ ಮೇಲೆ ಹೇಡಿತನದ ದಾಳಿಯನ್ನು ನಾನು ಖಂಡಿಸುತ್ತೇನೆ. ಭಯೋತ್ಪಾದನೆಯ ಎದುರಿಸಲು ಇಡೀ ರಾಷ್ಟ್ರ ಒಗ್ಗಟ್ಟಿನಿಂದ ನಿಂತಿದೆ. ಉಗ್ರರ ದಾಳಿಗಳು ಮಾನವೀಯತೆಗೆ ಕಳಂಕವಾಗಿವೆ. ಉನ್ನತ ಮೂಲಗಳ ಪ್ರಕಾರ ಅಮೂಲ್ಯ ಜೀವಗಳು ಕಳೆದುಹೋಗಿವೆ. ಭಾರತದ ರಾಷ್ಟ್ರೀಯ ಭದ್ರತೆಯು ಪ್ರಮುಖ ವಿಷಯವಾಗಿದೆ. ಭದ್ರತೆ ಖಾತ್ರಿಪಡಿಸಲು ಕೇಂದ್ರಸರ್ಕಾರ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸುವೆ ಎಂದು ಬರೆದುಕೊಂಡಿದ್ದಾರೆ.
ಇನ್ನೂ ಡಿಸಿಎಂ ಡಿ.ಕೆ.ಶಿವಕುಮಾರ್ ಟ್ವೀಟ್ ಮಾಡಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ಮನ ಬಂದಂತೆ ಗುಂಡಿನ ದಾಳಿ ನಡೆಸಿರುವ ವಿಚಾರ ತಿಳಿದು ಆಘಾತವಾಯಿತು. ಪ್ರವಾಸಿಗರ ಪೈಕಿ ಶಿವಮೊಗ್ಗ ಮೂಲದ ಓರ್ವ ಕನ್ನಡಿಗ ಮೃತಪಟ್ಟಿದ್ದು, ಅವರ ಮೃತದೇಹವನ್ನು ತರಲು ಸರ್ಕಾರದಿಂದ ಸಕಲ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಕಾಶ್ಮೀರದಲ್ಲಿ ಸಿಲುಕಿರುವ ಪ್ರವಾಸಿ ಕನ್ನಡಿಗರನ್ನು ಸಂಪರ್ಕಿಸಿ, ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಈಗಾಗಲೇ ಪೊಲೀಸ್ ಅಧಿಕಾರಿಗಳ ತಂಡವೊಂದನ್ನು ಕಳುಹಿಸಲಾಗಿದೆ. ಮೃತರ ಕುಟುಂಬಕ್ಕೆ ತೀವ್ರ ಸಂತಾಪಗಳು ಎಂದು ಉಪ ಸಂತಾಪ ಸೂಚಿಸಿದ್ದಾರೆ.