ಡಾರ್ಲಿಂಗ್ ಪ್ರಭಾಸ್ ಹಾಗೂ ಸ್ವೀಟಿ ಅನುಷ್ಕಾ ಶೆಟ್ಟಿ ತೆಲುಗು ಸಿನಿಪ್ರೇಮಿಗಳು ಅಚ್ಚುಮೆಚ್ಚಿನ ಜೋಡಿ. ಬಾಹುಬಲಿ ಸರಣಿ ಸಿನಿಮಾ ಬಂದ್ಮೇಲೆ ಈ ಜೋಡಿಯನ್ನು ಅಭಿಮಾನಿಗಳು ಮತ್ತೊಮ್ಮೆ ತೆರೆಯಲ್ಲಿ ಒಟ್ಟಿಗೆ ನೋಡಲು ಕಾಯುತ್ತಿದ್ದಾರೆ. ಆದ್ರೆ ಇಲ್ಲಿವರೆಗೂ ಅನುಷ್ಕಾ ಪ್ರಭಾಸ್ ಮತ್ತೊಮ್ಮೆ ತೆರೆಹಂಚಿಕೊಂಡಿಲ್ಲ. ಇವರಿಬ್ಬರನ್ನು ಕನ್ನಡದ ಖ್ಯಾತ ನಿರ್ಮಾಣ ಸಂಸ್ಥೆಯೊಂದು ಮಗದೊಮ್ಮೆ ಒಂದುಗೂಡಿಸುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಕೆಜಿಎಫ್, ಸಲಾರ್ ಸಿನಿಮಾಗಳನ್ನು ನಿರ್ಮಿಸಿರುವ ಹೊಂಬಾಳೆ ಈಗಾಗಲೇ ಪ್ರಭಾಸ್ ಜೊತೆ ಮೂರ್ನಾಲ್ಕು ಪ್ರಾಜೆಕ್ಟ್ ಮಾಡೋದಾಗಿ ಘೋಷಣೆ ಮಾಡಿದೆ. ಸದ್ಯ ಪ್ರಭಾಸ್ ಬೇರೆ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಹೊಂಬಾಳೆ ಕೂಡ ಬೇರೆ ಸಿನಿಮಾಗಳ ನಿರ್ಮಾಣದಲ್ಲಿ ಬ್ಯುಸಿಯಾಗಿದೆ. ಈ ನಡುವೆ ಪ್ರಭಾಸ್ ಒಪ್ಪಿಕೊಂಡಿರುವ ಮೂರ್ನಾಲ್ಕು ಪ್ರಾಜೆಕ್ಟ್ ಗಳ ಪೈಕಿ ಒಂದರಲ್ಲಿ ನಾಯಕಿಯಾಗಿ ಅನುಷ್ಕಾ ಶೆಟ್ಟಿ ನಟಿಸಲಿದ್ದಾರೆ ಎಂಬ ಹೊಸ ಸಮಾಚಾ ಹೊರಬಿದ್ದಿದೆ.
ಹೊಂಬಾಳೆ ನಿರ್ಮಾಣದಲ್ಲಿ ಬಾಹುಬಲಿ ಜೋಡಿ ಮತ್ತೊಮ್ಮೆ ತೆರೆಹಂಚಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಅನುಷ್ಕಾ-ಪ್ರಭಾಸ್ ಜೋಡಿಯಾಗಿ ನಟಿಸಿರುವ ‘ಬಿಲ್ಲಾ’, ‘ಮಿರ್ಚಿ’ ಹಾಗೂ ‘ಬಾಹುಬಲಿ’ ಸರಣಿ ಸಿನಿಮಾಗಳು ಸೂಪರ್ ಹಿಟ್ ಕಂಡಿವೆ. ಹೀಗಾಗಿ ಸಹಜವಾಗಿ ಅಭಿಮಾನಿಗಳಲ್ಲಿ ಈ ಜೋಡಿ ಮೇಲೆ ನಿರೀಕ್ಷೆ ಇದೆ. ಇವರಿಬ್ಬರನ್ನು ಹೊಂಬಾಳೆ ಸಂಸ್ಥೆ ಒಟ್ಟಿಗೆ ಕರೆತರುವ ಪ್ರಯತ್ನದಲ್ಲಿದೆ ಎನ್ನಲಾಗುತ್ತಿದೆ.